image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಯಾದಗಿರಿ ಜಿಲ್ಲೆಯಲ್ಲಿ ಭ್ರೂಣಹತ್ಯೆ ಆತಂಕ: 3000ಕ್ಕೂ ಹೆಚ್ಚು ಗರ್ಭಿಣಿಯರ ಹೆರಿಗೆ ಮಾಹಿತಿ ನಾಪತ್ತೆ!

ಯಾದಗಿರಿ ಜಿಲ್ಲೆಯಲ್ಲಿ ಭ್ರೂಣಹತ್ಯೆ ಆತಂಕ: 3000ಕ್ಕೂ ಹೆಚ್ಚು ಗರ್ಭಿಣಿಯರ ಹೆರಿಗೆ ಮಾಹಿತಿ ನಾಪತ್ತೆ!

ಯಾದಗಿರಿ : ಜಿಲ್ಲೆಯಲ್ಲಿ ಹೆಣ್ಣು ಭ್ರೂಣಹತ್ಯೆಯ ಪ್ರಕರಣಗಳು ಬೆಚ್ಚಿಬೀಳಿಸುವ ಹಂತಕ್ಕೆ ತಲುಪಿದ್ದು, ಒಂದು ವರ್ಷದ ಅವಧಿಯಲ್ಲಿ ಸಾವಿರಕ್ಕೂ ಹೆಚ್ಚು ಗರ್ಭಪಾತಗಳು ನಡೆದಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ನೋಂದಣಿ ಮಾಡಿಸಿದ್ದ ಒಟ್ಟು 31,435 ಗರ್ಭಿಣಿಯರ ಪೈಕಿ 3,127 ಮಂದಿಯ ಹೆರಿಗೆಯ ವಿವರಗಳೇ ಆರೋಗ್ಯ ಇಲಾಖೆಯ ಬಳಿ ಇಲ್ಲದಿರುವುದು ತೀವ್ರ ಸಂಚಲನ ಮೂಡಿಸಿದೆ.

​ಈ ಹಿಂದೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಆರೋಗ್ಯ ಇಲಾಖೆಯ ಅಂದಿನ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರು ತನಿಖೆಗೆ ಆದೇಶಿಸಿದ್ದರು. ಇದರ ಬೆನ್ನಲ್ಲೇ ಆರೋಗ್ಯ ಸಚಿವ ದಿನೇಶ ಗುಂಡೂರಾವ್‌ ಅವರ ನೇತೃತ್ವದಲ್ಲಿ ನಡೆದ ವೀಡಿಯೋ ಕಾನ್ಫೆರೆನ್ಸ್‌ ಸಭೆಯಲ್ಲಿ ಜಿಲ್ಲೆಯ ಈ ಆತಂಕಕಾರಿ ಅಂಕಿ-ಅಂಶಗಳು ಬಯಲಾಗಿವೆ. 2024-25ರ ಸಾಲಿನಲ್ಲಿ ದಾಖಲಾದ 31,435 ಗರ್ಭಿಣಿಯರಲ್ಲಿ 26,584 ಮಂದಿಗೆ ಜೀವಂತ ಹೆರಿಗೆಯಾಗಿದ್ದು, 188 ಶಿಶು ಮರಣಗಳು ಸಂಭವಿಸಿವೆ. ಉಳಿದಂತೆ 1,329 ಅಧಿಕೃತ ಗರ್ಭಪಾತ ಪ್ರಕರಣಗಳು ವರದಿಯಾಗಿವೆ. ಆದರೆ, ಇವೆಲ್ಲವನ್ನೂ ಹೊರತುಪಡಿಸಿ 3,000ಕ್ಕೂ ಹೆಚ್ಚು ಗರ್ಭಿಣಿಯರ ಸ್ಥಿತಿಗತಿ ಬಗ್ಗೆ ಇಲಾಖೆಯ ಬಳಿ ಯಾವುದೇ ಮಾಹಿತಿಯಿಲ್ಲ.

​ಈ ಗರ್ಭಿಣಿಯರಿಗೆ ನಂತರದಲ್ಲಿ ಏನಾಯಿತು? ಹೆಣ್ಣು ಎಂಬ ಕಾರಣಕ್ಕೆ ಕಾನೂನುಬಾಹಿರವಾಗಿ ಭ್ರೂಣಹತ್ಯೆ ಮಾಡಲಾಗಿದೆಯೇ? ಎಂಬ ಪ್ರಶ್ನೆಗಳು ಎದ್ದಿವೆ. ತನಿಖಾ ಸಮಿತಿಯ ಭೇಟಿಯ ವೇಳೆ ಜಿಲ್ಲೆಯಲ್ಲಿ ಗುರಿ ತಲುಪಲು ನಕಲಿ ತಾಯಿ ಕಾರ್ಡ್‌ಗಳನ್ನು ಸೃಷ್ಟಿಸಲಾಗುತ್ತಿದೆ ಎಂಬ ಆಘಾತಕಾರಿ ಆರೋಪಗಳೂ ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ರಾಜ್ಯಮಟ್ಟದ ಸಮಿತಿಯು ಈಗಾಗಲೇ ಜಿಲ್ಲಾದ್ಯಂತ ಸಂಚರಿಸಿ ಮಾಹಿತಿ ಸಂಗ್ರಹಿಸಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

​ಈ ಕುರಿತು ಪ್ರತಿಕ್ರಿಯಿಸಿರುವ ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು, ಗರ್ಭಪಾತ ಪ್ರಕರಣಗಳ ಕುರಿತು ರಾಜ್ಯಮಟ್ಟದ ಸಮಿತಿ ಮಾಹಿತಿ ಸಂಗ್ರಹಿಸಿದೆ. ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ತಡೆಗಟ್ಟಲು ಮತ್ತು ಅಕ್ರಮ ಗರ್ಭಪಾತಕ್ಕೆ ಕಡಿವಾಣ ಹಾಕಲು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಸರ್ಕಾರದ ವರದಿ ಸಲ್ಲಿಕೆಯಾದ ನಂತರ ಈ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

Category
ಕರಾವಳಿ ತರಂಗಿಣಿ