image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬಾಕಿ ಪರಿಹಾರ ನೀಡದ ಎಸಿ ಕಚೇರಿ ಪೀಠೋಪಕರಣ ಜಪ್ತಿ

ಬಾಕಿ ಪರಿಹಾರ ನೀಡದ ಎಸಿ ಕಚೇರಿ ಪೀಠೋಪಕರಣ ಜಪ್ತಿ

ಧಾರವಾಡ : ಧಾರವಾಡದ ಉಪವಿಭಾಗಾಧಿಕಾರಿಗಳ ಕಚೇರಿಯ ಪೀಠೋಪಕರಣಗಳನ್ನು ನ್ಯಾಯಾಲಯದ ಆದೇಶದಂತೆ ಜಪ್ತಿ ಮಾಡಿರುವ ಘಟನೆ ನಡೆದಿದೆ. ಸ್ಮಶಾನಕ್ಕಾಗಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ನಿಗದಿತ ಪರಿಹಾರ ಧನ ನೀಡದ ಹಿನ್ನೆಲೆಯಲ್ಲಿ ಧಾರವಾಡದ 2ನೇ ಅಧಿಕ ದಿವಾಣಿ ನ್ಯಾಯಾಲಯವು ಈ ಕಠಿಣ ಕ್ರಮಕ್ಕೆ ಆದೇಶಿಸಿತ್ತು.

​ನವಲಗುಂದ ತಾಲೂಕಿನ ಕೊಂಡಿಕೊಪ್ಪ ಗ್ರಾಮದ ನಾಗನಗೌಡ ಪಾಟೀಲ್ ಅವರಿಗೆ ಸೇರಿದ 2 ಎಕರೆ ಕೃಷಿ ಭೂಮಿಯನ್ನು 2010ರ ಏಪ್ರಿಲ್ 8ರಂದು ಸ್ಮಶಾನದ ಉದ್ದೇಶಕ್ಕಾಗಿ ಸರ್ಕಾರ ಭೂಸ್ವಾಧೀನಪಡಿಸಿಕೊಂಡಿತ್ತು. ಪ್ರತಿ ಗುಂಟೆಗೆ ₹10,500 ರಂತೆ ಒಟ್ಟು ₹35 ಲಕ್ಷ ಪರಿಹಾರ ನೀಡಬೇಕಿತ್ತು. ಆದರೆ ಜಿಲ್ಲಾಡಳಿತವು ಕೇವಲ ₹20 ಲಕ್ಷ ಪಾವತಿಸಿ, ಉಳಿದ ₹15 ಲಕ್ಷ ಬಾಕಿ ಉಳಿಸಿಕೊಂಡಿತ್ತು. ಈ ಕುರಿತು ರೈತರು ಹಲವು ಬಾರಿ ಮನವಿ ಮಾಡಿದರೂ ಸ್ಪಂದನೆ ಸಿಗದ ಕಾರಣ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

​ಕೋರ್ಟ್ ವಾರಂಟ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳು ಕಚೇರಿಗೆ ಭೇಟಿ ನೀಡಿ ನಾಲ್ಕು ಕುರ್ಚಿ ಹಾಗೂ ಒಂದು ಕಂಪ್ಯೂಟರ್ ಸೇರಿದಂತೆ ಪ್ರಮುಖ ಪೀಠೋಪಕರಣಗಳನ್ನು ವಶಕ್ಕೆ ಪಡೆದರು. ಈ ವೇಳೆ ಮಾತನಾಡಿದ ರೈತನ ಸಹೋದರ ಭೀಮನಗೌಡ, ಗ್ರಾಮದ ಹಿತದೃಷ್ಟಿಯಿಂದ ನಾವು ಜಮೀನು ಬಿಟ್ಟುಕೊಟ್ಟಿದ್ದರೂ, ಸರ್ಕಾರ ಮಾತ್ರ ನಮಗೆ ಬರಬೇಕಾದ ನ್ಯಾಯಯುತ ಹಣ ನೀಡಲು ಸತಾಯಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಕೀಲೆ ಶಿವಾನಿ ಪಾಟೀಲ್ ಮಾತನಾಡಿ, ಬಾಕಿ ಹಣ ಪಾವತಿಸದ ಕಾರಣ ಅನಿವಾರ್ಯವಾಗಿ ಜಪ್ತಿ ಪ್ರಕ್ರಿಯೆ ನಡೆಸಲಾಗಿದೆ ಎಂದು ತಿಳಿಸಿದರು.

Category
ಕರಾವಳಿ ತರಂಗಿಣಿ