ದಾವಣಗೆರೆ : ಜಿಲ್ಲೆಯ ಹರಿಹರ ಪಂಚಮಸಾಲಿ ಮಠದಲ್ಲಿ ಇಂದು ನಡೆದ ಟ್ರಸ್ಟಿಗಳ ಲೆಕ್ಕ ಒಪ್ಪಿಸುವ ಕಾರ್ಯಕ್ರಮವು ತೀವ್ರ ಸಂಘರ್ಷಕ್ಕೆ ಸಾಕ್ಷಿಯಾಯಿತು. ಮಠದ ಟ್ರಸ್ಟಿಗಳು ಮತ್ತು ವಚನಾನಂದ ಸ್ವಾಮೀಜಿ ಅವರ ಬೆಂಬಲಿಗರ ನಡುವೆ ಉಂಟಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ಪರಸ್ಪರ ನೂಕಾಟ-ತಳ್ಳಾಟ ನಡೆಯುವ ಮೂಲಕ ಮಠದ ಆವರಣ ರಣರಂಗದಂತಾಗಿತ್ತು.
ಲೆಕ್ಕ ಕೊಡುವ ಕಾರ್ಯಕ್ರಮಕ್ಕೂ ಮುನ್ನ ಟ್ರಸ್ಟಿಗಳು ಮಹಾಂತ ಸ್ವಾಮೀಜಿಯವರ ಗದ್ದುಗೆಗೆ ತೆರಳಿ ಪುಷ್ಪನಮನ ಸಲ್ಲಿಸುತ್ತಿದ್ದಾಗ, ವಚನಾನಂದ ಶ್ರೀಗಳ ಪರವಿದ್ದ ಭಕ್ತರ ಗುಂಪು ಟ್ರಸ್ಟಿಗಳ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿತು. ಇದಕ್ಕೆ ಪ್ರತಿಯಾಗಿ ಟ್ರಸ್ಟಿಗಳ ಬೆಂಬಲಿಗರು ಕೂಡ ಸ್ವಾಮೀಜಿಯವರ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು. ಪರಿಸ್ಥಿತಿ ಉದ್ವಿಗ್ನಗೊಂಡಾಗ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಈ ವೇಳೆ ವಚನಾನಂದ ಸ್ವಾಮೀಜಿ ಅವರು ಮೌನವಾಗಿ ಕುಳಿತು ಘಟನೆಯನ್ನು ವೀಕ್ಷಿಸುತ್ತಿದ್ದರು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ರಾಣೇಬೆನ್ನೂರು ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್ ಸೇರಿದಂತೆ ಪ್ರಮುಖ ಟ್ರಸ್ಟಿಗಳಾದ ಬಿ.ಸಿ. ಉಮಾಪತಿ, ಹೆಚ್.ಎಸ್. ನಾಗರಾಜ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಸೋಮನಗೌಡ ಮಾಲಿಪಾಟೀಲ್ ಅವರು ವಚನಾನಂದ ಶ್ರೀಗಳ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. "ವಚನಾನಂದ ಶ್ರೀಗಳು ಟ್ರಸ್ಟಿ ಬಿ.ಸಿ. ಉಮಾಪತಿ ಅವರಿಗೆ ಮೋಸ ಮಾಡಿದ್ದಾರೆ" ಎಂದು ಮಾಲಿಪಾಟೀಲ್ ಹೇಳಿರುವುದು ಸಂಚಲನ ಮೂಡಿಸಿದೆ. ಇತ್ತೀಚೆಗಷ್ಟೇ ಮೂವರು ಟ್ರಸ್ಟಿಗಳನ್ನು ಉಚ್ಚಾಟಿಸಿರುವುದಾಗಿ ಘೋಷಿಸಿದ್ದ ಮಾಲಿಪಾಟೀಲ್ ಅವರ ಈ ಹಳೆ ವಿಡಿಯೋ ಈಗ ಮಠದ ಆಂತರಿಕ ಕಲಹವನ್ನು ಮತ್ತಷ್ಟು ಬಹಿರಂಗಪಡಿಸಿದೆ.
ಈ ಬೆಳವಣಿಗೆಗಳ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಚನಾನಂದ ಸ್ವಾಮೀಜಿ, ಟ್ರಸ್ಟಿಗಳ ನಡೆ ಪಾರದರ್ಶಕವಾಗಿಲ್ಲ ಎಂದು ಕಿಡಿಕಾರಿದ್ದಾರೆ. "ಮಠಕ್ಕೆ 2008ರಿಂದ ಬಂದಿರುವ ಕಾಣಿಕೆ, ದವಸ ಧಾನ್ಯ ಹಾಗೂ ಚಿನ್ನಾಭರಣಗಳ ಪಾರದರ್ಶಕ ಲೆಕ್ಕ ನಮಗೆ ಬೇಕು. ಮೊಸರು ತಿಂದು ಮೇಕೆ ಬಾಯಿಗೆ ಒರೆಸುವ ಕೆಲಸ ಮಾಡಬೇಡಿ. ಹಿರಿಯ ಶ್ರೀಗಳಾದ ಮಹಾಂತ ಸ್ವಾಮಿಗಳಿಗೆ ಇವರು ನೀಡಿದ ಕಿರುಕುಳ ಅಸಂಖ್ಯ" ಎಂದು ಶ್ರೀಗಳು ದೂರಿದ್ದಾರೆ. ಕಳ್ಳರಂತೆ ಬಂದು ಪೊಲೀಸರ ರಕ್ಷಣೆಯಲ್ಲಿ ಲೆಕ್ಕ ಕೊಡುವುದನ್ನು ಸಮಾಜ ಒಪ್ಪುವುದಿಲ್ಲ, ನಮಗೆ ಬೇಕಿರುವುದು ರಾಮನ ಅಪ್ಪಟ ಲೆಕ್ಕ ಎಂದು ಸ್ವಾಮೀಜಿ ಗುಡುಗಿದ್ದಾರೆ. ಸದ್ಯ ಮಠದಲ್ಲಿ ಭುಗಿಲೆದ್ದಿರುವ ಈ ಲೆಕ್ಕಾಚಾರದ ಸಮರ ಪಂಚಮಸಾಲಿ ಸಮುದಾಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.