ಕುಮಟಾ: 2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮೈಸೂರು ಕ್ಷೇತ್ರದಿಂದ ಸ್ಪರ್ಧಿಸಲು ತಮಗೆ ಕಾಂಗ್ರೆಸ್ ಪಕ್ಷದಿಂದ ಆಫರ್ ಬಂದಿತ್ತು ಎಂಬ ಸ್ಫೋಟಕ ಸತ್ಯವನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಬಹಿರಂಗಪಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಟಿಕೆಟ್ ಕೈತಪ್ಪಿದ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮಗೆ ದೂರವಾಣಿ ಕರೆ ಮಾಡಿ ಕಾಂಗ್ರೆಸ್‌ಗೆ ಆಹ್ವಾನಿಸಿದ್ದರು ಎಂದು ತಿಳಿಸಿದರು.
ಕುಣಿಗಲ್ ಶಾಸಕ ರಂಗನಾಥ್ ಅವರ ಮೊಬೈಲ್ ಮೂಲಕ ಕರೆ ಮಾಡಿದ್ದ ಡಿ.ಕೆ. ಶಿವಕುಮಾರ್, "ಕಾಂಗ್ರೆಸ್‌ಗೆ ಬಂದುಬಿಡು, ನಿನಗೆ ಟಿಕೆಟ್ ಕೊಡುತ್ತೇವೆ" ಎಂದು ಆಫರ್ ನೀಡಿದ್ದರು. ಆದರೆ ಆ ಸಂದರ್ಭದಲ್ಲಿ ತಮ್ಮ ಸಿದ್ಧಾಂತವನ್ನು ಬಿಟ್ಟುಕೊಡಲು ಒಪ್ಪದ ಪ್ರತಾಪ್ ಸಿಂಹ, "ನಮ್ಮ ತಂದೆಯೇ ಆರ್‌ಎಸ್‌ಎಸ್ ಮೂಲದವರು. ನಿಮಗೂ ನಮಗೂ ಸಿದ್ಧಾಂತ ಹೊಂದಾಣಿಕೆಯಾಗುವುದಿಲ್ಲ, ಬರಲು ಸಾಧ್ಯವಿಲ್ಲ" ಎಂದು ನೇರವಾಗಿ ತಿರಸ್ಕರಿಸಿದ್ದಾಗಿ ಹೇಳಿದರು. "ಐದು ವರ್ಷದ ನಂತರ ಬೇಕಿದ್ದರೆ ವಾಪಸ್ ಹೋಗು, ಈಗ ಸರ್ವೈವಲ್ ಮುಖ್ಯ" ಎಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದರೂ, ನಾಲ್ವರು ಕಾಂಗ್ರೆಸ್ ಶಾಸಕರು ಬೆನ್ನತ್ತಿದ್ದರೂ ತಾವು ಯಾವುದಕ್ಕೂ ಬಗ್ಗದೆ ಬಿಜೆಪಿಯಲ್ಲಿಯೇ ಮುಂದುವರಿದಿರುವುದಾಗಿ ಅವರು ಸ್ಪಷ್ಟಪಡಿಸಿದರು.
ಕಾಂಗ್ರೆಸ್‌ನಲ್ಲಿ ತಮಗೆ ಗೌರವಯುತ ಸ್ಥಾನಮಾನ ಸಿಗುತ್ತಿತ್ತು ಮತ್ತು ಆ ಪಕ್ಷದಿಂದ ಸ್ಪರ್ಧಿಸಿದ್ದರೆ ಜಯ ಖಚಿತವಾಗಿತ್ತು ಎಂದು ಅಭಿಪ್ರಾಯಪಟ್ಟ ಸಿಂಹ, ತಮ್ಮ ಕೆಲಸ ಮತ್ತು ಬರವಣಿಗೆಯನ್ನು ನಂಬಿ ಬಂದ ಲಕ್ಷಾಂತರ ಯುವಕರ ಭವಿಷ್ಯಕ್ಕಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು. ಇದೇ ವೇಳೆ ತಮ್ಮ ಭವಿಷ್ಯದ ರಾಜಕೀಯ ನಡೆಯ ಬಗ್ಗೆ ಸುಳಿವು ನೀಡಿದ ಅವರು, 2028ರ ವಿಧಾನಸಭಾ ಚುನಾವಣೆಯಲ್ಲಿ ಜನರ ವಿಶ್ವಾಸ ಗಳಿಸಿ ವಿಧಾನಸೌಧ ಪ್ರವೇಶಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಹೋಟೆಲ್‌ಗೆ ಹಾಲು ಹಾಕುತ್ತಿದ್ದ ಸಾಮಾನ್ಯ ಹುಡುಗನಾಗಿ ಬಡತನದಿಂದ ಮೇಲೆ ಬಂದು, ಇಂದು ಪತ್ರಕರ್ತನಾಗಿ ಹಾಗೂ ರಾಜಕಾರಣಿಯಾಗಿ ಗುರುತಿಸಿಕೊಂಡಿರುವುದು ಸಾಮಾನ್ಯ ಯುವಕರಿಗೂ ಸ್ಫೂರ್ತಿಯಾಗಲಿ ಎಂದು ಅವರು ಆಶಿಸಿದರು.