ಬೆಂಗಳೂರು: ಖಾಸಗಿ ವಿಡಿಯೋಗಳನ್ನು ಇಟ್ಟುಕೊಂಡು ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ನೀಡುವಂತೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಯನಗರದ 4ನೇ ಬ್ಲಾಕ್‌ನಲ್ಲಿ ಸೆಲೆಬ್ರಿಟಿ ಮೇಕಪ್ ಕ್ಲಿನಿಕ್ ಮತ್ತು ಆಸ್ಪತ್ರೆ ನಡೆಸುತ್ತಿರುವ ಉದ್ಯಮಿ ಕಾರ್ತಿಕ್ ಎಂಬುವವರು ನೀಡಿದ ದೂರಿನನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದ ಯುವತಿಯೊಬ್ಬಳು, ಉದ್ಯಮಿಯ ಜೊತೆಗಿದ್ದ ಸಂದರ್ಭದ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರಿಸಿಕೊಂಡಿದ್ದಳು. ಇವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಹಾಗೂ ಕುಟುಂಬದವರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿ 1.50 ಕೋಟಿ ರೂ. ಹಣ ನೀಡುವಂತೆ ಬೇಡಿಕೆಯಿಟ್ಟಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯುವತಿಯ ಬೆದರಿಕೆಗೆ ಹೆದರಿದ ಉದ್ಯಮಿ ಈಗಾಗಲೇ ಹಂತ ಹಂತವಾಗಿ 5 ಲಕ್ಷ ರೂಪಾಯಿಯನ್ನು ಆನ್‌ಲೈನ್ ಮೂಲಕ ಹಾಗೂ 5 ಲಕ್ಷ ರೂಪಾಯಿಯನ್ನು ನಗದಾಗಿ ನೀಡಿದ್ದಾರೆ. ಇದರೊಂದಿಗೆ 35 ಸಾವಿರ ರೂ. ಮೌಲ್ಯದ ಚಿನ್ನದ ಉಂಗುರ, 70 ಸಾವಿರ ರೂ. ಮೌಲ್ಯದ ಚಿನ್ನದ ಸರ ಹಾಗೂ 1.50 ಲಕ್ಷ ರೂ. ಬೆಲೆಯ ಐಫೋನ್ ಕೂಡ ನೀಡಿದ್ದಾರೆ ಎನ್ನಲಾಗಿದೆ. ಇಷ್ಟೆಲ್ಲಾ ನೀಡಿದರೂ ಯುವತಿ ಮತ್ತೆ 1.50 ಕೋಟಿ ರೂ. ಹಣಕ್ಕಾಗಿ ಪೀಡಿಸುತ್ತಿದ್ದು, ಹಣ ನೀಡಲು ಸಾಧ್ಯವಿಲ್ಲ ಎಂದಾಗ ಉದ್ಯಮಿಯ ಪತ್ನಿ ಮತ್ತು ಕುಟುಂಬಸ್ಥರಿಗೆ ವಿಡಿಯೋ ಕಳುಹಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಉದ್ಯಮಿಯ ಮನೆಯಲ್ಲಿ ಗಲಾಟೆ ಕೂಡ ನಡೆದಿದೆ ಎಂದು ಮೂಲಗಳು ತಿಳಿಸಿವೆ.