ಬೆಂಗಳೂರು : ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದೆ. ಈ ವರ್ಷ ಶೇ.94.1ರಷ್ಟು ದಾಖಲೆಯ ಫಲಿತಾಂಶ ಬಂದಿದೆಯಾದರೂ ಕಲಬುರಗಿ ಜಿಲ್ಲೆ ಫಲಿತಾಂಶದಲ್ಲಿ ಕೊನೇ ಸ್ಥಾನದಲ್ಲಿದೆ. ಇದೇ ವಿಚಾರವಾಗಿ ಇದೀಗ ವಿಪಕ್ಷಗಳಾದ ಬಿಜೆಪಿ-ಜೆಡಿಎಸ್ ನಾಯಕರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪ್ರಿಯಾಂಕ್ ಖರ್ಗೆ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ. ಉಡುಪಿ ಜಿಲ್ಲೆ ದ್ವಿತೀಯ ಹಾಗೂ ಉತ್ತರ ಕನ್ನಡ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ಒಟ್ಟಾರೆ ಕರಾವಳಿ ಜಿಲ್ಲೆಗಳ ವಿದ್ಯಾರ್ಥಿಗಳು ಈ ಬಾರಿ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಆದರೆ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಜಿಲ್ಲೆ ಕಳಪೆ ಫಲಿತಾಂಶ ಹೊಂದಿದ್ದು, ಕೊನೇ ಸ್ಥಾನದಲ್ಲಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಕಲಬುರಗಿ ಕೊನೇ ಸ್ಥಾನದಲ್ಲಿರುವ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಸಚಿವ ಪ್ರಿಯಾಂಕ್ ಖರ್ಗೆ ಅವರ ಕಾಲೆಳೆದಿದೆ. ಪ್ರಿಯಾಂಕ್ ಖರ್ಗೆ ಅವರು ರಿಸಲ್ಟ್ ವೀಕ್ಷಿಸುತ್ತಿರುವಂತಹ ಫೋಟೋ ಹಾಕಿ ವಾಗ್ದಳಿ ನಡೆಸಿದೆ. ಟ್ವೀಟ್ ಮಾಡಿ ಖರ್ಗೆ ಎಂಬ ಶೀರ್ಷಿಕೆಯೊಂದಿಗೆ ಎಸ್.ಎಸ್.ಎಲ್.ಸಿ ಫಲಿತಾಂಶ ಬಂದಿದೆ ಟ್ವೀಟ್ ಮಾಡಿ ಖರ್ಗೆ ಎಂದು ಕುಟುಕಿದೆ.
ಇನ್ನೊಂದೆಡೆ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಕಲಬುರಗಿ 35 ಅಂದರೆ ಕೊನೆಯ ಸ್ಥಾನ ಪಡೆದಿದ್ದು, ಹಿಂದಿನ ವರ್ಷದಲ್ಲಿಯೂ 34ನೇ ಸ್ಥಾನದಲ್ಲಿತ್ತು. 4-5 ದಶಕಗಳಿಂದ ಕಲಬುರಗಿ ಜಿಲ್ಲೆ ಆಳುತ್ತಿರುವ ಖರ್ಗೆ ಕುಟುಂಬ ಸ್ವಂತ ಜಿಲ್ಲೆಯ ಮಕ್ಕಳ ಭವಿಷ್ಯ ರೂಪಿಸುವಲ್ಲಿ ವಿಫಲವಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಜೆಡಿಎಸ್ ಹರಿಹಾಯ್ದಿದೆ. ಕಲಬುರಗಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ, ಶಿಕ್ಷಕರ ನೇಮಕ ಸೇರಿದಂತೆ ಶಿಕ್ಷಣದ ಪ್ರಗತಿಗೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದೀರಿ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಅವರೇ, ನಿಮ್ಮ ಭಾಷಣದ ಸಾಧನೆಗೆ ಈ ಫಲಿತಾಂಶವನ್ನು ಸೇರಿಸಿಕೊಳ್ಳಿ. ಕಲಬುರಗಿಯನ್ನು ಅಕ್ಷರಶಃ ಶೈಕ್ಷಣಿಕ ಅಂಧಕಾರಕ್ಕೆ ದೂಡಿದ್ದೀರಿ. ಮಾತಿನಲ್ಲಿ ತೋರಿಸುವ ಶೌರ್ಯ ಶಿಕ್ಷಣದ ಸುಧಾರಣೆಯಲ್ಲಿ ತೋರಿಸಿ ಎಂದಿರುವ ಜೆಡಿಎಸ್ ಪ್ರಿಯಾಂಕ್ ಖರ್ಗೆಯನ್ನು ನಾಟಿಕೋಳಿ ಮಿನಿಸ್ಟರ್ ಎಂದು ವ್ಯಂಗ್ಯವಾಡಿದೆ.