image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬೆಳಗಾವಿಯಲ್ಲಿ 100 ಕೋಟಿ ರೂ. ವೆಚ್ಚದ 'ಮಿನಿ ತಿರುಪತಿ': ಟಿಟಿಡಿ ಮಹತ್ವದ ಘೋಷಣೆ

ಬೆಳಗಾವಿಯಲ್ಲಿ 100 ಕೋಟಿ ರೂ. ವೆಚ್ಚದ 'ಮಿನಿ ತಿರುಪತಿ': ಟಿಟಿಡಿ ಮಹತ್ವದ ಘೋಷಣೆ

ಬೆಳಗಾವಿ : ಬೆಳಗಾವಿಯ ಭಕ್ತರ ದಶಕಗಳ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ಆಂಧ್ರಪ್ರದೇಶದ ತಿರುಮಲ ಮಾದರಿಯಲ್ಲೇ ಬೆಳಗಾವಿಯಲ್ಲಿ ಭವ್ಯ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ತಲೆಎತ್ತಲಿದೆ. ಉತ್ತರ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಭಕ್ತರಿಗೆ ಇನ್ಮುಂದೆ ತಿರುಪತಿ ಬಾಲಾಜಿಯ ದರ್ಶನ ಪಡೆಯಲು ನೂರಾರು ಕಿಲೋಮೀಟರ್ ಪ್ರಯಾಣಿಸುವ ಅಗತ್ಯವಿಲ್ಲ. ಬೆಳಗಾವಿಯ ಹೊರವಲಯದಲ್ಲಿರುವ ಏಳು ಎಕರೆ ಪ್ರದೇಶದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಭವ್ಯ ವೆಂಕಟೇಶ್ವರ ದೇವಸ್ಥಾನ ನಿರ್ಮಾಣವಾಗಲಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (TTD) ಆಡಳಿತ ಮಂಡಳಿ ಸದಸ್ಯ ಎಸ್. ನರೇಶ ಕುಮಾರ ತಿಳಿಸಿದ್ದಾರೆ.

​ಬೆಳಗಾವಿ ರೆಡ್ಡಿ ಸಂಘವು ದೇವಸ್ಥಾನಕ್ಕಾಗಿ ಈಗಾಗಲೇ 7 ಎಕರೆ ಜಮೀನನ್ನು ಟಿಟಿಡಿಗೆ ಹಸ್ತಾಂತರಿಸಿದೆ. ಮುಂದಿನ ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ದೇವಸ್ಥಾನದ ಗರ್ಭಗುಡಿ, ವೆಂಕಟೇಶ್ವರ ಮೂರ್ತಿ ಮತ್ತು ಕಟ್ಟಡಕ್ಕೆ ಬಳಸುವ ಕಲ್ಲುಗಳನ್ನು ಆಂಧ್ರಪ್ರದೇಶದಿಂದಲೇ ತರಲಾಗುವುದು. ಈ ಬೃಹತ್ ಯೋಜನೆಗೆ ಸರ್ಕಾರದಿಂದ ಯಾವುದೇ ಅನುದಾನ ಪಡೆಯುತ್ತಿಲ್ಲ. ಯೋಜನೆಯ ಒಟ್ಟು ವೆಚ್ಚದಲ್ಲಿ ಶೇ. 80ರಷ್ಟು ಹಣವನ್ನು ಟಿಟಿಡಿ ಭರಿಸಲಿದ್ದು, ಉಳಿದ ಶೇ. 20ರಷ್ಟು ಹಣವನ್ನು ರೆಡ್ಡಿ ಸಂಘ ಹಾಗೂ ದಾನಿಗಳಿಂದ ಸಂಗ್ರಹಿಸಲಾಗುತ್ತದೆ. ತಿರುಮಲದಲ್ಲಿ ನಡೆಯುವಂತೆಯೇ ಇಲ್ಲಿಯೂ ಪೂಜಾ ಕೈಂಕರ್ಯಗಳು ಜರುಗಲಿವೆ. ತಿರುಪತಿಯ ಪ್ರಸಿದ್ಧ ಲಡ್ಡು ಪ್ರಸಾದ, ಭಕ್ತರಿಗೆ ವಸತಿ ವ್ಯವಸ್ಥೆ ಹಾಗೂ ನಿತ್ಯೋತ್ಸವಗಳು ಇಲ್ಲಿನ ವಿಶೇಷತೆಯಾಗಿರಲಿವೆ.

​ಬೆಳಗಾವಿಯು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಕೇಂದ್ರ ಸ್ಥಾನವಾಗಿರುವುದರಿಂದ, ಇಲ್ಲಿ ದೇವಸ್ಥಾನ ನಿರ್ಮಾಣವಾಗುವುದರಿಂದ ಲಕ್ಷಾಂತರ ಭಕ್ತರಿಗೆ ಅನುಕೂಲವಾಗಲಿದೆ. ಟಿಟಿಡಿ ಸಂಸ್ಥೆಯು ದೇಶಾದ್ಯಂತ ಸನಾತನ ಧರ್ಮದ ಪ್ರಚಾರಕ್ಕಾಗಿ ಮೀಸಲಿಟ್ಟಿರುವ ನಿಧಿಯ ಅಡಿಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೆಡ್ಡಿ ಜನಸಂಘದ ಅಧ್ಯಕ್ಷ ಲಕ್ಷ್ಮಣ ರೆಡ್ಡಿ ಸೇರಿದಂತೆ ಸಂಘದ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ