image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ತೃತೀಯ ಭಾಷೆಗಳಿಗೆ ಅಂಕಗಳನ್ನು ನೀಡಲು ಹೈಕೋರ್ಟ್ ಮಹತ್ವದ ಆದೇಶ

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ತೃತೀಯ ಭಾಷೆಗಳಿಗೆ ಅಂಕಗಳನ್ನು ನೀಡಲು ಹೈಕೋರ್ಟ್ ಮಹತ್ವದ ಆದೇಶ

​ಬೆಂಗಳೂರು: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಅಂಕಗಳ ಬದಲಾಗಿ ಗ್ರೇಡ್ ನೀಡಲು ಮುಂದಾಗಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್‌ನಲ್ಲಿ ತೀವ್ರ ಹಿನ್ನಡೆಯಾಗಿದೆ. 2025-26ನೇ ಸಾಲಿನಲ್ಲೂ ಈ ವಿಷಯಗಳಿಗೆ ಅಂಕಗಳನ್ನು ನೀಡುವ ಹಳೆಯ ಪದ್ಧತಿಯನ್ನೇ ಮುಂದುವರಿಸಬೇಕು ಎಂದು ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಖಡಕ್ ಸೂಚನೆ ನೀಡಿದೆ. ಈ ಕುರಿತು ಸರ್ಕಾರದ ಮರುಪರಿಶೀಲನಾ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರ ಏಕಸದಸ್ಯ ಪೀಠವು, ಪರೀಕ್ಷಾ ಅಧಿಸೂಚನೆ ಹೊರಡಿಸುವ ಸಂದರ್ಭದಲ್ಲೇ ಇಂತಹ ಬದಲಾವಣೆಗಳ ಬಗ್ಗೆ ಸ್ಪಷ್ಟಪಡಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದೆ. ಅಧಿಸೂಚನೆಯಲ್ಲಿ ಇಲ್ಲದ ಹೊಸ ಪದ್ಧತಿಯನ್ನು ಏಕಾಏಕಿ ಅನುಷ್ಠಾನಕ್ಕೆ ತರುವುದು ಸರಿಯಲ್ಲ ಎಂದು ತಿಳಿಸಿದ ಪೀಠವು, ನಿಯಮಗಳನ್ನು ರೂಪಿಸುವ ಮೊದಲು ಚಾಲ್ತಿಯಲ್ಲಿದ್ದ ಅಂಕ ಪದ್ಧತಿಯನ್ನೇ ಮುಂದುವರಿಸುವಂತೆ ಆದೇಶಿಸಿ ಅರ್ಜಿ ಇತ್ಯರ್ಥಪಡಿಸಿದೆ.

​ಹಿಂದಿ ಭಾಷೆಯಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದು, ಅವರ ಮೇಲಿನ ಒತ್ತಡ ಕಡಿಮೆ ಮಾಡಲು ಗ್ರೇಡ್ ಪದ್ಧತಿ ಜಾರಿಗೆ ತರಲಾಗುತ್ತಿದೆ ಎಂಬ ಸರ್ಕಾರದ ವಾದವನ್ನು ನ್ಯಾಯಾಲಯ ಮಾನ್ಯ ಮಾಡಿಲ್ಲ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲೇ ಗ್ರೇಡ್ ಪದ್ಧತಿಯ ಬಗ್ಗೆ ಘೋಷಣೆ ಮಾಡಿದ್ದನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿಂದೆ ವಿಭಾಗೀಯ ಪೀಠದಲ್ಲೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೊಂಡು ದಂಡ ವಿಧಿಸಲಾಗಿದ್ದರೂ, ಪ್ರಸ್ತುತ ಏಕಸದಸ್ಯ ಪೀಠವು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಂಕ ಪದ್ಧತಿಯೇ ಮುಂದುವರಿಯಬೇಕೆಂದು ಸ್ಪಷ್ಟಪಡಿಸಿದೆ. ಈ ಆದೇಶದ ಮೂಲಕ ತೃತೀಯ ಭಾಷೆ ಮತ್ತು ಎನ್‌ಎಸ್‌ಕ್ಯೂಎಫ್ ವಿಷಯಗಳಲ್ಲಿ ಅಂಕಗಳ ಬದಲಿಗೆ ಗ್ರೇಡ್ ನೀಡುವ ಸರ್ಕಾರದ ಪ್ರಯತ್ನಕ್ಕೆ ಸದ್ಯಕ್ಕೆ ತಡೆ ಬಿದ್ದಂತಾಗಿದೆ.

Category
ಕರಾವಳಿ ತರಂಗಿಣಿ