ಬೆಂಗಳೂರು : 'ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಘೋಷಿಸಿರುವ ₹5,300 ಕೋಟಿ ಅನುದಾನ ಬಿಡುಗಡೆ ಮಾಡುವ ಬಗ್ಗೆ ಯಾವುದೇ ಖಾತರಿ ಕೊಡುವುದಿಲ್ಲ' ಎಂದು ಕೇಂದ್ರ ಜಲಶಕ್ತಿ ಸಚಿವಾಲಯದ ಸಲಹಾ ಸಮಿತಿ ಸ್ಪಷ್ಟಪಡಿಸಿದೆ. ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ವಿ.ಎಲ್.ಕಾಂತಾ ರಾವ್ ಅಧ್ಯಕ್ಷತೆಯಲ್ಲಿ ನಡೆದ ಸಲಹಾ ಸಮಿತಿಯ 160ನೇ ಸಭೆಯಲ್ಲಿ ಮೂರು ಷರತ್ತುಗಳನ್ನು ವಿಧಿಸಿ ಯೋಜನೆಯ ₹21,167 ಕೋಟಿ ಪರಿಷ್ಕೃತ ವೆಚ್ಚಕ್ಕೆ ಅನುಮೋದನೆ ಕೊಡಲಾಗಿದೆ. ಕೇಂದ್ರ ಜಲ ಆಯೋಗದ ಅಧ್ಯಕ್ಷರು, ನೀತಿ ಆಯೋಗದ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದ ಈ ಸಭೆಯಲ್ಲಿ ರಾಜ್ಯ ಸರ್ಕಾರಕ್ಕೆ ಈ ಷರತ್ತು ವಿಧಿಸಲಾಗಿದೆ. ಈ ಯೋಜನೆಗೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಪ್ರವಾಹ ನಿರ್ವಹಣೆ ಯೋಜನೆ ಸೇರಿದಂತೆ ಯಾವುದೇ ಯೋಜನೆ ಅಥವಾ ಬಾಹ್ಯ ಹಣಕಾಸು ನೆರವು ಕೊಡಿಸುವ ಖಾತರಿ ನೀಡುವುದಿಲ್ಲ ಎಂದು ಸಮಿತಿ ಸ್ಪಷ್ಟವಾಗಿ ಹೇಳಿದೆ. ಅಲ್ಲದೇ, ಈ ಯೋಜನೆಗಳೆಲ್ಲ 16ನೇ ಹಣಕಾಸು ಆಯೋಗದ ಅವಧಿಯಲ್ಲಿ ಹೊಸ ಸ್ವರೂಪ ಪಡೆಯುವ ಸಾಧ್ಯತೆ ಇದೆ ಎಂದೂ ಸಲಹಾ ಸಮಿತಿ ಹೇಳಿದೆ. ಯೋಜನೆಗೆ ಕೇಂದ್ರ ಅರಣ್ಯ ಸಚಿವಾಲಯ, ಬುಡಕಟ್ಟು ಸಚಿವಾಲಯ ಸೇರಿದಂತೆ ವಿವಿಧ ಇಲಾಖೆಗಳಿಂದ ಅಗತ್ಯ ಅನುಮೋದನೆ ಪಡೆಯಬೇಕು ಎಂದು ಸಮಿತಿ ನಿರ್ದೇಶನ ನೀಡಿದೆ.
ರೈತರಿಗೆ ಸಕಾಲದಲ್ಲಿ ನೀರು ತಲುಪುವಂತೆ ನೋಡಿಕೊಳ್ಳಲು ತ್ವರಿತಗತಿಯಲ್ಲಿ ಶಾಖಾ ಕಾಲುವೆಗಳ ಕಾಮಗಾರಿಗಳನ್ನು ನಡೆಸಬೇಕು ಎಂದು ನೀತಿ ಆಯೋಗದ ಉಪ ಸಲಹೆಗಾರರು ಸಲಹೆ ನೀಡಿದರು. 'ಪ್ರಸ್ತುತ ಮುಖ್ಯ ಕಾಲುವೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕೆರೆಗಳನ್ನು ತುಂಬಿಸುತ್ತೇವೆ. ನಂತರ ಹಂತ ಹಂತವಾಗಿ ಶಾಖಾ ಕಾಲುವೆಗಳನ್ನು ಕೈಗೆತ್ತಿಕೊಳ್ಳಲಾಗುವುದು' ಎಂದು ಕರ್ನಾಟಕ ಸರ್ಕಾರದ ಅಧಿಕಾರಿಗಳು ಸ್ಪಷ್ಟಪಡಿಸಿದರು. '2020ರಲ್ಲಿ ನಡೆದ ಸಲಹಾ ಸಮಿತಿಯ 147ನೇ ಸಭೆಯಲ್ಲಿ ಯೋಜನೆಯ ಮೌಲ್ಯಮಾಪನ ನಡೆಸಲಾಗಿತ್ತು. 2018-19ನೇ ಸಾಲಿನ ದರಕ್ಕೆ ಅನುಗುಣವಾಗಿ ಯೋಜನಾ ಮೊತ್ತ ₹16,125 ಕೋಟಿಗೆ ಹೂಡಿಕೆ ಅನುಮೋದನೆ ಸಮಿತಿ 2021ರಲ್ಲಿ ಒಪ್ಪಿಗೆ ಕೊಟ್ಟಿತ್ತು. ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಪರಿಗಣಿಸಲು ಉನ್ನತಾಧಿಕಾರ ಸಮಿತಿ ಶಿಫಾರಸು ಮಾಡಿತ್ತು. 2022ರಲ್ಲಿ ನಡೆದ ಸಾರ್ವಜನಿಕ ಹೂಡಿಕೆ ಸಮಿತಿ ಸಭೆಯಲ್ಲಿ ಯೋಜನೆಯ ಮೌಲ್ಯಮಾಪನ ನಡೆಸಲಾಗಿತ್ತು. ಈಗಿನ ದರ ಹಂತಕ್ಕೆ ಅನುಗುಣವಾಗಿ ಯೋಜನಾ ಮೊತ್ತ ಪರಿಷ್ಕರಣೆ ಮಾಡಲು ತೀರ್ಮಾನಿಸಲಾಗಿತ್ತು. ಇದೀಗ ಪರಿಷ್ಕೃತ ಮೊತ್ತದ ಪ್ರಸ್ತಾವ ಸಲ್ಲಿಸಲಾಗಿದೆ' ಎಂದು ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸಮಿತಿಯ ಗಮನಕ್ಕೆ ತಂದರು.