ಚಿಕ್ಕಮಗಳೂರು: ನಾವು ಮಹಾಪುರುಷರ ಜಯಂತಿಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸುತ್ತಿದ್ದೇವೆ. ಇಂದು ಮನೆ ಮನೆಗೆ ಬಸವಣ್ಣನವರ ಫೋಟೋಗಳು ಬಂದಿವೆಯೇ ಹೊರತು ಅವರ ತತ್ವಗಳು ಬಂದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ವಿಷಾದ ವ್ಯಕ್ತಪಡಿಸಿದರು. ನಗರದ ಕುವೆಂಪು ಕಲಾ ಮಂದಿರದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ 'ಶ್ರೀ ಬಸವ ಜಯಂತಿ' ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದ ಮಹಾತ್ಮರನ್ನು ಇಂದು ಒಂದು ಜಾತಿಗೆ ಕಟ್ಟಿ ಹಾಕಲಾಗುತ್ತಿದೆ ಎಂದು ರವಿ ಸಿ.ಟಿ ಬೇಸರ ವ್ಯಕ್ತಪಡಿಸಿದರು. ಕುವೆಂಪು ವಿಶ್ವಮಾನವ ಸಂದೇಶ ನೀಡಿದರು, ಕನಕದಾಸರು ಕುಲದ ಕಲಹ ಬೇಡವೆಂದರು, ಬಸವಣ್ಣನವರು 'ಇವ ನಮ್ಮವ' ಎಂಬ ಸಮಾನತೆಯ ಮಂತ್ರ ಬೋಧಿಸಿದರು. ಆದರೆ ಇಂದು ಅವರನ್ನು ಪೂಜೆ, ಪುಷ್ಪಾರ್ಚನೆಗೆ ಮಾತ್ರ ಸೀಮಿತಗೊಳಿಸಿ, ಅವರ ವಿಚಾರಗಳನ್ನು ಅಳವಡಿಸಿಕೊಳ್ಳುವಲ್ಲಿ ನಾವು ವಿಫಲರಾಗುತ್ತಿದ್ದೇವೆ ಎಂದರು.
ಸಮಾಜದಲ್ಲಿ ನಡೆಯುತ್ತಿರುವ ಮರ್ಯಾದೆಗೇಡು ಹತ್ಯೆಗಳ ಬಗ್ಗೆ ಪ್ರಸ್ತಾಪಿಸಿದ ಅವರು, 12ನೇ ಶತಮಾನದಲ್ಲಿ ಅಲ್ಲಮಪ್ರಭುಗಳ ನೇತೃತ್ವದ ಅನುಭವ ಮಂಟಪದಲ್ಲಿ ನಡೆದ ಸದ್ವಿಚಾರಗಳ ವಿನಿಮಯವೇ ನಿಜವಾದ ಕ್ರಾಂತಿ. ಅದನ್ನು ಬಿಟ್ಟು ಅನ್ಯ ಕೋಮಿನ ವ್ಯಕ್ತಿಯನ್ನು ವಿವಾಹವಾದ ಕಾರಣಕ್ಕೆ ಗರ್ಭಿಣಿಯನ್ನು ಹತ್ಯೆ ಮಾಡುವುದು ಕ್ರಾಂತಿಯಲ್ಲ, ಅದು ಅಮಾನವೀಯ ಕೃತ್ಯ. ನಾವು ಬಸವಣ್ಣನವರ ತತ್ವಗಳನ್ನು ಜಂಗಮವಾಗಿ ಸ್ವೀಕರಿಸಿಲ್ಲ. ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಎಂಬ ಮಾತಿನಂತೆ ಅವರ ವಿಚಾರಗಳು ನಮ್ಮ ಬದುಕಿನ ಭಾಗವಾಗಬೇಕಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಸಾಹಿತಿ ಶ್ರೀ ಬಿ. ತಿಪ್ಪೇರುದ್ರಪ್ಪ ಆಗಮಿಸಿದ್ದರು. ಜಿಲ್ಲಾಡಳಿತದ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಮಾನತೆ ಸಾರಿದ ಸರ್ವಜ್ಞನಂತಹ ಕವಿಗಳ ಜಾತಿ ಹುಡುಕುವ ಪ್ರಯತ್ನಗಳು ನಡೆಯುತ್ತಿರುವುದು ದುರದೃಷ್ಟಕರ ಎಂದು ರವಿ ಈ ಸಂದರ್ಭದಲ್ಲಿ ತಿಳಿಸಿದರು.