ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಡಾನೆ ಹಾಗೂ ವನ್ಯಜೀವಿಗಳ ಹಾವಳಿ ತಡೆಗಟ್ಟಲು ಮತ್ತು ರೈತರ ಬೆಳೆ ಹಾನಿಗೆ ತಕ್ಷಣವೇ ಪರಿಹಾರ ಒದಗಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ಅರಣ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದ್ದ ಅರಣ್ಯಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರ ಹಿತರಕ್ಷಣೆ ಮತ್ತು ವನ್ಯಜೀವಿ ಸಂಘರ್ಷ ತಡೆಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದರು.
ಮೂಡಿಗೆರೆ ಮತ್ತು ಕೊಪ್ಪ ಭಾಗದಲ್ಲಿ ಆನೆಗಳ ಉಪಟಳ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಆನೆಗಳನ್ನು ಸೆರೆಹಿಡಿಯಲು ಈ ಭಾಗದಲ್ಲೇ ಪ್ರತ್ಯೇಕ 'ಆನೆ ಸೆರೆ ಕಾರ್ಯತಂಡ' ಸ್ಥಾಪಿಸುವ ಕುರಿತು ಸಚಿವರು ಕಾರ್ಯಸಾಧ್ಯ ವರದಿ ಕೇಳಿದ್ದಾರೆ. ವನ್ಯಜೀವಿಗಳಿಂದ ಬೆಳೆ ಹಾನಿಯಾದಲ್ಲಿ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಜಿಪಿಎಸ್ ಆಧಾರಿತ ಚಿತ್ರಗಳೊಂದಿಗೆ ಹಾನಿಯನ್ನು ನಿರ್ಧರಿಸಬೇಕು. ಸದ್ಯ ವೃತ್ತಕ್ಕೆ 1 ಕೋಟಿ ರೂ. ಬಿಡುಗಡೆಯಾಗಿದ್ದು, ಬಾಕಿ ಇರುವ ಎಲ್ಲಾ ಪರಿಹಾರ ಹಣವನ್ನು ವಿಳಂಬವಿಲ್ಲದೆ ವಿತರಿಸಲು ಸೂಚಿಸಲಾಗಿದೆ.
ಇನ್ನು ರಾಜ್ಯದ ವಿವಿಧೆಡೆ ಆನೆ ಹಾವಳಿ ತಡೆಗೆ ಅಳವಡಿಸಲಾಗಿರುವ ರೈಲ್ವೆ ಬ್ಯಾರಿಕೇಡ್‌ಗಳ ಪರಿಣಾಮದ ಬಗ್ಗೆ ಅಧ್ಯಯನ ನಡೆಸಲು ಸಚಿವರು ಸೂಚಿಸಿದ್ದಾರೆ. ಬ್ಯಾರಿಕೇಡ್ ಅಳವಡಿಸಿದ ನಂತರ ಆನೆ ಹಾಗೂ ಕಾಡುಕೋಣಗಳ ಹಾವಳಿ ಎಷ್ಟು ಪ್ರಮಾಣದಲ್ಲಿ ತಗ್ಗಿದೆ ಎಂಬ ವರದಿಯನ್ನು ಅವರು ಕೇಳಿದ್ದಾರೆ. ಇದರೊಂದಿಗೆ ಅರಣ್ಯ ಇಲಾಖೆಯ ಹೊರಗುತ್ತಿಗೆ ಸಿಬ್ಬಂದಿಗೆ ಅಗತ್ಯ ಉಪಕರಣಗಳನ್ನು ಒದಗಿಸುವುದು ಹಾಗೂ ನಿಯಮಿತವಾಗಿ ವೇತನ ಮತ್ತು ಭತ್ಯೆ ಪಾವತಿಸುವಂತೆ ನಿರ್ದೇಶನ ನೀಡಿದ್ದಾರೆ.
ವನ್ಯಜೀವಿಗಳ ಸಾವಿಗೆ ಕಾರಣವಾಗುವಂತೆ ತೋಟಗಳಲ್ಲಿ ಅಕ್ರಮವಾಗಿ ಉರುಳು ಅಳವಡಿಸುವವರ ವಿರುದ್ಧ ಕಠಿಣ ನಿಗಾ ವಹಿಸಲು ಸೂಚಿಸಿದ ಸಚಿವರು, ಇತ್ತೀಚೆಗೆ ಕಳಸದಲ್ಲಿ ಕಾಡುಕೋಣದ ದಾಳಿಗೆ ಕೂಲಿ ಕಾರ್ಮಿಕರೊಬ್ಬರು ಬಲಿಯಾದ ಘಟನೆಗೆ ತೀವ್ರ ನೋವು ವ್ಯಕ್ತಪಡಿಸಿದರು. ಕಾಡುಕೋಣಗಳನ್ನು ಸೆರೆಹಿಡಿಯುವಲ್ಲಿ ತರಬೇತಿ ಪಡೆದ ಸಿಬ್ಬಂದಿಗಳನ್ನು ಸಮಸ್ಯಾತ್ಮಕ ಪ್ರದೇಶಗಳಲ್ಲಿ ನಿಯೋಜಿಸಿ, ಜನರ ಪ್ರಾಣ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.