ಶಿವಮೊಗ್ಗ : ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ವಿಮಾನ ಸಂಚಾರ ಸೇವೆ ಮುಂದುವರಿಸುವಂತೆ ಸರ್ಕಾರದ ಮೇಲೆ ಒತ್ತಡ ತರಲು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮತ್ತು ಪದಾಧಿಕಾರಿಗಳು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದರು. ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ವಿಮಾನ ಸೇವೆ ಪ್ರಾರಂಭಿಸಿರುವುದು ಮಲೆನಾಡು ಪ್ರದೇಶಕ್ಕೆ ಅತ್ಯಂತ ಅನುಕೂಲಕರವಾಗಿದ್ದು, ಪ್ರಯಾಣಿಕರ ಸಂಖ್ಯೆಯೂ ಹೆಚ್ಚಿರುವುದರಿಂದ ಇದು ಲಾಭದಾಯಕ ಮಾರ್ಗವಾಗಿ ನಡೆಯುತ್ತಿದೆ. ಆದರೂ ಪ್ರಸ್ತುತ ಇರುವ ವಿಮಾನ ಹಾರಾಟಗಳ ಸಂಖ್ಯೆ ಕಡಿಮೆ ಇದ್ದು, ವೇಗವಾಗಿ ಬೆಳೆಯುತ್ತಿರುವ ಶಿವಮೊಗ್ಗದ ಕೈಗಾರಿಕೆ, ವ್ಯಾಪಾರ, ಶಿಕ್ಷಣ, ಆರೋಗ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಅಗತ್ಯಗಳನ್ನು ಪೂರೈಸಲು ಇದು ಸಾಕಾಗುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ವಿಮಾನ ಸಂಪರ್ಕವು ಹೊಸ ಹೂಡಿಕೆಗಳನ್ನು ಆಕರ್ಷಿಸಲು ನೆರವಾಗುವುದಲ್ಲದೆ, ರಾಜ್ಯ ಸರ್ಕಾರದ 'ಐಟಿ ಬಿಯಾಂಡ್ ಬೆಂಗಳೂರು' ಯೋಜನೆಗೆ ಪೂರಕವಾಗಿದೆ. ಅಲ್ಲದೆ, ಕೃಷಿ ಉತ್ಪನ್ನಗಳನ್ನು ರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸಲು ಕೃಷಿ ಲಾಜಿಸ್ಟಿಕ್ಸ್ ಅನ್ನು ಸುಧಾರಿಸಲು ಇದು ಸಹಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಇಂಡಿಗೋ, ಸ್ಟಾರ್ ಏರ್ ಮತ್ತು ಸ್ಪೈಸ್ ಜೆಟ್ ಸಂಸ್ಥೆಗಳೊಂದಿಗೆ ಸಂವಹನ ನಡೆಸಿ ಹೆಚ್ಚಿನ ವಿಮಾನ ಸೇವೆಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಉದ್ಯಮಿಗಳು ಒತ್ತಾಯಿಸಿದರು. ವಿಮಾನ ಸಂಚಾರ ಸೇವೆ ಮುಂದುವರಿಸುವುದರಿಂದ ಜಿಲ್ಲೆಯ ಆರ್ಥಿಕ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಹೆಚ್ಚಿನ ಶಕ್ತಿ ಸಿಗಲಿದೆ ಎಂದು ಅವರು ವಿವರಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಸಂಸದ ಬಿ.ವೈ.ರಾಘವೇಂದ್ರ ಅವರು, ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಿ ವಿಮಾನಯಾನ ಸೇವೆಯನ್ನು ಮುಂದುವರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಹಾಗೂ ವಿವಿಧ ವಿಮಾನಯಾನ ಸಂಸ್ಥೆಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಯಾವುದೇ ಕಾರಣಕ್ಕೂ ಸಂಚಾರ ಸೇವೆಯನ್ನು ನಿಲ್ಲಿಸಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಎ.ಎಂ.ಸುರೇಶ್, ಸಹ ಕಾರ್ಯದರ್ಶಿ ಕೆ.ಎಸ್.ಸುಕುಮಾರ್, ಖಜಾಂಚಿ ಆರ್.ಮನೋಹರ ಮತ್ತು ನಿರ್ದೇಶಕರಾದ ಗಣೇಶ ಎಂ.ಅಂಗಡಿ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.