ಮಂಡ್ಯ : ರಾಗಿ ಮುದ್ದೆ ಕೇವಲ ಆಹಾರವಲ್ಲ ಅದೊಂದು ಶಕ್ತಿ, ಮಂಡ್ಯದಲ್ಲಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಅದನ್ನು ಫೇಮಸ್ ಮಾಡಿದ್ದಾರೆ, ಯುವಕರು ರಾಗಿ ಮುದ್ದೆ ಹಾಗೂ ನವಧಾನ್ಯಗಳನ್ನು ಹೆಚ್ಚು ಸೇವಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಂಡ್ಯದ ಆದಿಚುಂಚನಗಿರಿ ಮಠದಲ್ಲಿ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕರ್ನಾಟಕದ ಸಂಸ್ಕೃತಿ ಮತ್ತು ಮಠದ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಕರ್ನಾಟಕಕ್ಕೆ ಬರುವುದೆಂದರೆ ನನಗೆ ಖುಷಿಯ ವಿಷಯ. ಇಲ್ಲಿಗೆ ಬಂದಾಗಲೆಲ್ಲಾ ಹೊಸ ಪ್ರೇರಣೆ ಸಿಗುತ್ತದೆ. ಅದರಲ್ಲೂ ಸಕ್ಕರೆ ನಾಡು ಮಂಡ್ಯಕ್ಕೆ ಬಂದಿರುವುದು ಈ ಭೇಟಿಯನ್ನು ಇನ್ನಷ್ಟು ಮಹತ್ವಪೂರ್ಣವಾಗಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.
ಕರ್ನಾಟಕದ ಮಣ್ಣಿನ ಗುಣವನ್ನು ಬಣ್ಣಿಸಿದ ಪ್ರಧಾನಿ, ಈ ಮಣ್ಣು ತತ್ವಜ್ಞಾನ ಮತ್ತು ತಂತ್ರಜ್ಞಾನ ಎರಡರಲ್ಲೂ ಸಮೃದ್ಧವಾಗಿದೆ. ಇಲ್ಲಿ ದರ್ಶನದ ಆಳವೂ ಇದೆ, ಟೆಕ್ನಾಲಜಿಯ ಶಕ್ತಿಯೂ ಇದೆ. ಆದಿಚುಂಚನಗಿರಿ ಮಠವು ಕಳೆದ ಎರಡು ಸಾವಿರ ವರ್ಷಗಳಿಂದ ಭಾರತದ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಜೀವಂತವಾಗಿರಿಸಿರುವ ಸಾಕ್ಷಾತ್ ರೂಪ ಎಂದರು. ಪೂಜ್ಯ ಬಾಲಗಂಗಾಧರನಾಥ ಸ್ವಾಮೀಜಿಯವರನ್ನು ಸ್ಮರಿಸಿದ ಮೋದಿ, ಅವರು ಕೇವಲ ಆಧ್ಯಾತ್ಮಿಕ ಮಾರ್ಗದರ್ಶನಕ್ಕೆ ಸೀಮಿತವಾಗಿರಲಿಲ್ಲ. ಗ್ರಾಮೀಣ ಭಾಗದಿಂದ ಬಂದಿದ್ದರಿಂದ ಅವರಿಗೆ ಹಳ್ಳಿಯ ಯುವಕರ ಆಕಾಂಕ್ಷೆ ಮತ್ತು ಸವಾಲುಗಳ ಅರಿವಿತ್ತು. ಭಕ್ತಿ ಎಂದರೆ ಸಮಾಜದಿಂದ ದೂರ ಹೋಗುವುದಲ್ಲ, ಸಮಾಜದ ಜವಾಬ್ದಾರಿ ತೆಗೆದುಕೊಳ್ಳುವುದು ಎಂದು ಅವರು ತೋರಿಸಿಕೊಟ್ಟರು. ಬಡ ಮಕ್ಕಳಿಗೆ ಎಂಜಿನಿಯರಿಂಗ್, ಮೆಡಿಕಲ್ ಶಿಕ್ಷಣ ನೀಡುವ ಮೂಲಕ ಅವರು ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ ಎಂದು ಗುಣಗಾನ ಮಾಡಿದರು. ಸ್ವಾಮೀಜಿಯವರ ಪರಿಸರ ಪ್ರೇಮವನ್ನು ಮೆಚ್ಚಿದ ಪ್ರಧಾನಿ, ಅವರ ಕರುಣೆ ಕೇವಲ ಮನುಷ್ಯರಿಗೆ ಸೀಮಿತವಾಗಿರಲಿಲ್ಲ. ರಾಷ್ಟ್ರಪಕ್ಷಿ ನವಿಲುಗಳ ಸಂರಕ್ಷಣೆಗಾಗಿ ಅವರು ನಡೆಸಿದ ಸಾಮಾಜಿಕ ಆಂದೋಲನವು ಇಂದಿಗೂ ನಮಗೆ ಮಾದರಿ. ಪರಿಸರ ಸಂರಕ್ಷಣೆ ನಮ್ಮ ಸಾಂಸ್ಕೃತಿಕ ಚೇತನದ ಭಾಗ ಎಂಬುದನ್ನು ಅವರು ಸಾಬೀತುಪಡಿಸಿದರು ಎಂದರು.