image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮೈಸೂರಿನಲ್ಲಿ ಶೀಘ್ರವೇ ಪ್ರಾದೇಶಿಕ ಔಷಧಿ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆ: ಆರೋಗ್ಯ ಇಲಾಖೆಯಿಂದ ಮಹತ್ವದ ಆದೇಶ

ಮೈಸೂರಿನಲ್ಲಿ ಶೀಘ್ರವೇ ಪ್ರಾದೇಶಿಕ ಔಷಧಿ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆ: ಆರೋಗ್ಯ ಇಲಾಖೆಯಿಂದ ಮಹತ್ವದ ಆದೇಶ

ಮೈಸೂರು : ಮೈಸೂರಿನಲ್ಲಿ ಶೀಘ್ರವೇ ಪ್ರಾದೇಶಿಕ ಔಷಧಿ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆಗೆ ರಾಜ್ಯ ಸರ್ಕಾರ ಅಧಿಕೃತ ಸೂಚನೆ ನೀಡಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜಾಗುವ ಔಷಧಿಗಳ ಗುಣಮಟ್ಟವನ್ನು ಪರೀಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದ್ದು, ಮೈಸೂರಿನಲ್ಲಿರುವ ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಪ್ರಯೋಗಾಲಯದ ಆವರಣದಲ್ಲೇ ಈ ಹೊಸ ಕೇಂದ್ರ ಕಾರ್ಯಾರಂಭ ಮಾಡಲಿದೆ.​ ಪ್ರಸ್ತುತ ಇಂತಹ ಪರೀಕ್ಷಾ ಕೇಂದ್ರಗಳು ಬೆಂಗಳೂರು, ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ ಮಾತ್ರ ಇವೆ. ಮೈಸೂರು ವಿಭಾಗದ ಜಿಲ್ಲೆಗಳ ಔಷಧಿಗಳನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗುತ್ತಿತ್ತು. ಅಲ್ಲಿನ ಹೆಚ್ಚಿನ ಒತ್ತಡದಿಂದಾಗಿ ವರದಿ ಬರಲು ಕನಿಷ್ಠ ಮೂರು ತಿಂಗಳು ಕಾಯಬೇಕಾದ ಪರಿಸ್ಥಿತಿ ಇತ್ತು. ಇದರಿಂದಾಗಿ ಔಷಧಿ ಸರಬರಾಜು ವಿಳಂಬವಾಗುತ್ತಿತ್ತು. ಈಗ ಮೈಸೂರಿನಲ್ಲಿ ಹೊಸ ಕೇಂದ್ರ ಸ್ಥಾಪನೆಯಾಗುವುದರಿಂದ ಬೆಂಗಳೂರು ಲ್ಯಾಬ್ ಮೇಲಿನ ಹೊರೆ ಕಡಿಮೆಯಾಗಲಿದ್ದು, ಕೇವಲ ಕೆಲವೇ ದಿನಗಳಲ್ಲಿ ವರದಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

​ಈ ನೂತನ ಪ್ರಯೋಗಾಲಯದಿಂದ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು, ಮಂಗಳೂರು ಮತ್ತು ಉಡುಪಿ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಔಷಧಿಗಳ ಗುಣಮಟ್ಟ, ಸುರಕ್ಷತೆ ಮತ್ತು ಸಾಮರ್ಥ್ಯವನ್ನು ಶೀಘ್ರವಾಗಿ ಪತ್ತೆಹಚ್ಚಲು ಹಾಗೂ ನಕಲಿ ಔಷಧಿಗಳ ಹಾವಳಿ ತಡೆಯಲು ಇದು ಸಹಕಾರಿಯಾಗಲಿದೆ. ಪ್ರಯೋಗಾಲಯದ ಸ್ಥಾಪನೆಗಾಗಿ ಬೆಂಗಳೂರು, ಹುಬ್ಬಳ್ಳಿ ಮತ್ತು ಬಳ್ಳಾರಿಯಿಂದ ವೈಜ್ಞಾನಿಕ ಅಧಿಕಾರಿಗಳು, ಲ್ಯಾಬ್ ಮೇಲ್ವಿಚಾರಕರು ಹಾಗೂ ಟೆಕ್ನಿಷಿಯನ್ಸ್ ಅವರನ್ನು ಮೈಸೂರಿಗೆ ವರ್ಗಾವಣೆ ಮಾಡಲು ಸರ್ಕಾರ ಆದೇಶಿಸಿದೆ. ಜಿಲ್ಲಾ ಆರೋಗ್ಯ ಇಲಾಖೆಯ ಸಂಪನ್ಮೂಲಗಳನ್ನು ಬಳಸಿಕೊಂಡು ಅಗತ್ಯ ಯಂತ್ರೋಪಕರಣಗಳನ್ನು ಸಜ್ಜುಗೊಳಿಸಲು ಸೂಚಿಸಲಾಗಿದೆ.​ ಈ ಕುರಿತು ಪ್ರತಿಕ್ರಿಯಿಸಿರುವ ಮೈಸೂರು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕುಮಾರಸ್ವಾಮಿ ಅವರು, ಸ್ಥಳೀಯವಾಗಿ ಪರೀಕ್ಷಾ ವರದಿ ಲಭ್ಯವಾಗುವುದರಿಂದ ಆಸ್ಪತ್ರೆಗಳ ನಿರ್ವಹಣೆ ಸುಲಭವಾಗಲಿದೆ ಎಂದಿದ್ದಾರೆ. ಔಷಧಿ ಸರಬರಾಜುದಾರರು ಸಹ ಈ ನಿರ್ಧಾರವನ್ನು ಸ್ವಾಗತಿಸಿದ್ದು, ವಿಳಂಬವಿಲ್ಲದೆ ಸಕಾಲಕ್ಕೆ ಔಷಧಿ ಪೂರೈಸಲು ಇದು ನೆರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Category
ಕರಾವಳಿ ತರಂಗಿಣಿ