image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಯುವಜನತೆಯಲ್ಲಿ ಮಾನವೀಯತೆ ಬೆಳೆಯದಿದ್ದರೆ ಶಿಕ್ಷಣ ಸಾರ್ಥಕವಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಯುವಜನತೆಯಲ್ಲಿ ಮಾನವೀಯತೆ ಬೆಳೆಯದಿದ್ದರೆ ಶಿಕ್ಷಣ ಸಾರ್ಥಕವಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ದೇಶದ ಯುವಜನತೆಯಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಹಾಗೂ ಮಾನವೀಯ ಮೌಲ್ಯಗಳು ಹೆಚ್ಚಾದಾಗ ಮಾತ್ರ ಸುಶಿಕ್ಷಿತ ಸಮಾಜ ನಿರ್ಮಾಣ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು. ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕರ್ನಾಟಕ ಸರ್ಕಾರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿದ್ದ 'ಕನ್ನಡ ಸಾಮರಸ್ಯದ ನೆಲೆಗಳು' ಯೋಜನೆಯಡಿ 41 ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆಶಯಗಳನ್ನು ಪ್ರತಿಯೊಬ್ಬರೂ ಸರಿಯಾಗಿ ಅರ್ಥೈಸಿಕೊಂಡಾಗ ಮಾತ್ರ ಸಮ ಸಮಾಜದ ಕನಸು ನನಸಾಗಲು ಸಾಧ್ಯ ಎಂದ ಅವರು, ಸಂವಿಧಾನ ಜಾರಿಯಾದ ನಂತರ ಸುಧಾರಣಾ ಪ್ರಕ್ರಿಯೆ ವೇಗ ಪಡೆದಿದ್ದರೂ ಸಾಮಾಜಿಕ ವ್ಯವಸ್ಥೆ ಇಂದಿಗೂ ಪೂರ್ಣ ಪ್ರಮಾಣದಲ್ಲಿ ಬದಲಾಗಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಜಾತಿ ವ್ಯವಸ್ಥೆಯ ಜಡತ್ವವನ್ನು ಹೋಗಲಾಡಿಸಲು ಪ್ರತಿಯೊಬ್ಬರಿಗೂ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ಲಭಿಸುವುದು ಅನಿವಾರ್ಯವಾಗಿದೆ ಎಂದು ಪ್ರತಿಪಾದಿಸಿದ ಮುಖ್ಯಮಂತ್ರಿಗಳು, ಬಸವಣ್ಣನವರ 'ಇವ ನಮ್ಮವ' ಎಂಬ ಸದಾಶಯ ಎಲ್ಲರಲ್ಲೂ ಮೂಡಬೇಕೆಂದು ಕರೆ ನೀಡಿದರು. ವಿದ್ಯಾವಂತರು ಕರ್ಮ ಸಿದ್ಧಾಂತದಂತಹ ಮೂಢನಂಬಿಕೆಗಳನ್ನು ನಂಬುವುದು ಸಮಾಜದ ದುರಂತ ಎಂದು ವಿಷಾದಿಸಿದ ಅವರು, ಕುವೆಂಪು ಹಾಗೂ ಬಸವಣ್ಣನವರ ತತ್ವಗಳು ಯುವ ಪೀಳಿಗೆಗೆ ದಾರಿದೀಪವಾಗಬೇಕು ಎಂದರು. ರಾಜಕಾರಣಕ್ಕಾಗಿ ಸಮಾಜದಲ್ಲಿ ದ್ವೇಷ ಬಿತ್ತುವವರ ಬಗ್ಗೆ ಜನತೆ ಎಚ್ಚರದಿಂದಿರಬೇಕು ಮತ್ತು ಮನುಷ್ಯತ್ವವನ್ನು ಮೀರಿದ ಪೂಜೆ ಯಾವುದೂ ಇಲ್ಲ ಎಂದು ಅವರು ಮಾರ್ಮಿಕವಾಗಿ ನುಡಿದರು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಸಾಹಿತಿ ಬರಗೂರು ರಾಮಚಂದ್ರಪ್ಪ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ