image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಅಧಿಕಾರ ಹಸ್ತಾಂತರ ವಿಚಾರದಲ್ಲಿ ಪಕ್ಷ ತಮಗೆ ಸ್ಪಷ್ಟತೆ ನೀಡಬೇಕು ಎಂದು ನೇರವಾಗಿಯೇ ಕೇಳಿದ ಡಿ.ಕೆ.ಶಿ!

ಅಧಿಕಾರ ಹಸ್ತಾಂತರ ವಿಚಾರದಲ್ಲಿ ಪಕ್ಷ ತಮಗೆ ಸ್ಪಷ್ಟತೆ ನೀಡಬೇಕು ಎಂದು ನೇರವಾಗಿಯೇ ಕೇಳಿದ ಡಿ.ಕೆ.ಶಿ!

ಬೆಂಗಳೂರು : ಅತ್ತ ಸಂಪುಟ ಪುನಾರಚನೆಗೆ ವರಿಷ್ಠರ ಮೇಲೆ ಒತ್ತಡ ಹಾಕಲು ಮುಖ್ಯಮಂತ್ರಿ ಬಣದಲ್ಲಿ ಗುರುತಿಸಿಕೊಂಡ ಹಿರಿಯ ಶಾಸಕರು ದೆಹಲಿಯಲ್ಲಿ ಬೀಡುಬಿಟ್ಟ ಬೆನ್ನಲ್ಲೇ ಇತ್ತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನೆಗೆ ದೌಡಾಯಿಸಿ, ಅಧಿಕಾರ ಹಸ್ತಾಂತರ ವಿಚಾರದಲ್ಲಿ ಪಕ್ಷ ತಮಗೆ ಸ್ಪಷ್ಟತೆ ನೀಡಬೇಕು ಎಂದು ನೇರವಾಗಿಯೇ ಕೇಳಿದ್ದಾರೆ ಎನ್ನಲಾಗಿದೆ. ಏನು ಮಾಡಬೇಕಿತ್ತೋ ಅದನ್ನೇ ಮಾಡಿ ಎಂದು ಖರ್ಗೆ ಬಳಿ ಖಡಕ್‌ ಬೇಡಿಕೆ ಇರಿಸಿದ್ದಾರೆ ಎಂದು ತಿಳಿದು ಬಂದಿದೆ. ಖರ್ಗೆ ಅವರನ್ನು ಭೇಟಿಯಾದ ಡಿ.ಕೆ. ಶಿವಕುಮಾರ್‌, ಅಧಿಕಾರ ಹಸ್ತಾಂತರ ಕಾಲ ಸನ್ನಿಹಿತವಾದಾಗೆಲ್ಲ ಈ ರೀತಿ ಸಂಪುಟ ಪುನಾರಚನೆ ವಿಚಾರ ಮುನ್ನೆಲೆಗೆ ಬರುತ್ತದೆ. ಪಂಚರಾಜ್ಯಗಳ ಚುನಾವಣೆ ನಡೆಯುತ್ತಿದೆ. ಸಂಸತ್ತಿನ ವಿಶೇಷ ಅಧಿವೇಶನ ಕೂಡ ನಡೆಯಲಿದೆ. ಈ ಹಂತದಲ್ಲಿ ಶಾಸಕರು ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ. ವರಿಷ್ಠರ ಭೇಟಿ ಮಾಡಲಿ. ಆದರೆ, ಬಹಿರಂಗ ಹೇಳಿಕೆಗಳು ನೀಡುವುದು ಸರಿಯಲ್ಲ. ಅಧಿಕಾರ ಹಸ್ತಾಂತರ ವಿಚಾರದಲ್ಲಿ ತಮಗೆ ಸ್ಪಷ್ಟತೆ ನೀಡಬೇಕು, ಯಾವುದನ್ನು ಮಾಡಬೇಕಾಗಿದೆಯೋ ಅದನ್ನು ಆದ್ಯತೆ ಮೇರೆಗೆ ಮಾಡಿ, ಅದು ಬಿಟ್ಟು ಬೇರೆ ಏನೇನೋ ಮಾಡಲು ಹೊರಟರೆ ಹೇಗೆ? ಪ್ರಶ್ನಿಸಿದರೆನ್ನಲಾಗಿದೆ.

ತಾವು ಇಲ್ಲಿ ಇರುವಾಗಲೇ 25-30 ಶಾಸಕರು ದೆಹಲಿಗೆ ಪ್ರಯಾಣ ಬೆಳೆಸುತ್ತಾರೆ. ಬಹಿರಂಗವಾಗಿಯೇ ಹೇಳಿಕೆಗಳನ್ನೂ ನೀಡುತ್ತಾರೆ. ಇದು ಎಷ್ಟು ಸರಿ? ಇದರಿಂದ ತಪ್ಪು ಸಂದೇಶ ರವಾನೆಯಾಗುತ್ತದೆ. ಅವರೆಲ್ಲರಿಗೂ ತಾವು ಕ್ಲಾಸ್‌ ತೆಗೆದುಕೊಳ್ಳಬೇಕು. ಜತೆಗೆ ಸಂಪುಟ ಪುನಾರಚನೆಗೆ ಅವಕಾಶ ನೀಡಬಾರದು ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ಈ ವಿಚಾರದಲ್ಲಿ ಪಕ್ಷದ ಅಧಿನಾಯಕ ರಾಹುಲ್‌ ಗಾಂಧಿ ತೀರ್ಮಾನ ಕೈಗೊಳ್ಳಲಿದ್ದಾರೆ. ಹಾಗಾಗಿ, ಅವರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿರುವುದಾಗಿ ತಿಳಿದುಬಂದಿದೆ. ಈ ಹಿಂದೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಸಿಎಂ-ಡಿಸಿಎಂ ಭೇಟಿಯಾಗಿದ್ದರು. ಈ ಸಂದರ್ಭದಲ್ಲೂ ಡಿ.ಕೆ. ಶಿವಕುಮಾರ್‌, 'ಅಧಿಕಾರ ಹಸ್ತಾಂತರ ವಿಚಾರದಲ್ಲಿ ತಮಗೆ ಸ್ಪಷ್ಟತೆ ನೀಡಬೇಕು' ಎಂದು ನೇರವಾಗಿ ಕೇಳಿದ್ದರು ಎನ್ನಲಾಗಿತ್ತು.

Category
ಕರಾವಳಿ ತರಂಗಿಣಿ