ಬೆಂಗಳೂರು : ಅಸ್ತಿತ್ವಕ್ಕೆ ಬರುವ ಎಷ್ಟೋ ವರ್ಷಗಳ ಮೊದಲೇ, ಇಲ್ಲದ ಕಂಪನಿಯೊಂದಕ್ಕೆ ಸುಮಾರು 53 ಎಕರೆ 26 ಗುಂಟೆ ಜಮೀನು ಸ್ವಾಧೀನಪಡಿಸಿಕೊಂಡು ಹಂಚಿಕೆ ಮಾಡಿರುವ ಸರ್ಕಾರದ ಕ್ರಮವನ್ನು ಕರ್ನಾಟಕ ಹೈಕೋರ್ಟ್ 'ಸಂವಿಧಾನಕ್ಕೆ ಮಾಡಿದ ವಂಚನೆ' ಎಂದು ಕರೆದಿದೆ. ಈ ಬಹುಕೋಟಿ ಹಗರಣದ ಸತ್ಯಾಸತ್ಯತೆ ಹೊರಬರಲು ಸಿಬಿಐ ತನಿಖೆಗೆ ಆದೇಶಿಸಿರುವ ನ್ಯಾಯಾಲಯ, ಸಂಬಂಧಪಟ್ಟ ಸಂಸ್ಥೆಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದೆ. ಹೆಬ್ಬಾಳದ ಅಮಾನಿಕೆರೆ ಬಳಿಯ ಅತೀ ಹೆಚ್ಚು ಮೌಲ್ಯದ ಜಮೀನನ್ನು 2004ರಲ್ಲಿ ರೈತರಿಂದ ಎಕರೆಗೆ ಕೇವಲ 15 ಲಕ್ಷ ರೂಪಾಯಿಯಂತೆ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಇದನ್ನು 'ಲೇಕ್‌ವ್ಯೂ ಟೂರಿಸಂ ಕಾರ್ಪೊರೇಷನ್' ಎಂಬ ಸಂಸ್ಥೆಗೆ ರಿಯಲ್ ಎಸ್ಟೇಟ್ ಉದ್ದೇಶಕ್ಕಾಗಿ ಹಂಚಿಕೆ ಮಾಡಲಾಗಿತ್ತು. ವಿಶೇಷವೆಂದರೆ, ಈ ಸಂಸ್ಥೆಯು ಜಮೀನಿಗಾಗಿ 2000ನೇ ಇಸವಿಯಲ್ಲಿ ಅರ್ಜಿ ಸಲ್ಲಿಸಿತ್ತು, ಆದರೆ ಸಂಸ್ಥೆ ಅಧಿಕೃತವಾಗಿ ನೋಂದಣಿಯಾಗಿದ್ದೇ 2011ರಲ್ಲಿ! ಅಂದರೆ, ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಗೆ ಭೂಮಿ ನೀಡಲು ಅಂದಿನ ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿತ್ತು.