image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಹಂದೂರು ಗ್ರಾಮದಿಂದ ಎನ್.ಆರ್.ಪುರಕ್ಕೆ ಸಂಪರ್ಕಿಸುವ ನೂತನ ಭದ್ರಾ ಸೇತುವೆಯನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಹಂದೂರು ಗ್ರಾಮದಿಂದ ಎನ್.ಆರ್.ಪುರಕ್ಕೆ ಸಂಪರ್ಕಿಸುವ ನೂತನ ಭದ್ರಾ ಸೇತುವೆಯನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ನರಸಿಂಹರಾಜಪುರ : ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಜನರ ಸುಮಾರು 65 ವರ್ಷಗಳ ಸುದೀರ್ಘ ಬೇಡಿಕೆಯಾಗಿದ್ದ ಹಂದೂರು ಗ್ರಾಮದಿಂದ ಎನ್.ಆರ್.ಪುರಕ್ಕೆ ಸಂಪರ್ಕಿಸುವ ನೂತನ ಭದ್ರಾ ಸೇತುವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದರು. ಈ ಮೂಲಕ ಭದ್ರಾ ಹಿನ್ನೀರಿನಿಂದಾಗಿ ಸಂಪರ್ಕ ಕಳೆದುಕೊಂಡಿದ್ದ ಹತ್ತಾರು ಗ್ರಾಮಗಳಿಗೆ ಈಗ ನೇರ ರಸ್ತೆ ಸಂಪರ್ಕ ದೊರೆತಂತಾಗಿದೆ. ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ (ಎನ್‌ಆರ್ ಪುರ) ತಾಲೂಕಿನಲ್ಲಿ ಇಂದು ನಡೆದ ಭವ್ಯ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಂದೂರು-ಹೊನ್ನೇಕೊಡಿಗೆ ಸೇತುವೆಯನ್ನು ಉದ್ಘಾಟಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಸುಮಾರು 800 ಮೀಟರ್ ಉದ್ದದ ಈ ಬೃಹತ್ ಸೇತುವೆಯು ಭದ್ರಾ ಅಣೆಕಟ್ಟು ನಿರ್ಮಾಣದ ನಂತರ ಪ್ರತ್ಯೇಕವಾಗಿದ್ದ ಗ್ರಾಮಗಳನ್ನು ತಾಲೂಕು ಕೇಂದ್ರಕ್ಕೆ ಹತ್ತಿರವಾಗಿಸಿದೆ.

ಈ ಹಿಂದೆ ಹಂದೂರು ಭಾಗದ ಜನರು ಎನ್‌ಆರ್ ಪುರ ತಲುಪಲು ಸುಮಾರು 30 ಕಿ.ಮೀ ಸುತ್ತಿ ಬರಬೇಕಿತ್ತು. ಈ ನೂತನ ಸೇತುವೆಯಿಂದಾಗಿ ಈಗ ಕೇವಲ 5 ಕಿ.ಮೀ ಕ್ರಮಿಸಿದರೆ ತಾಲೂಕು ಕೇಂದ್ರವನ್ನು ತಲುಪಬಹುದಾಗಿದೆ. ಸೇತುವೆ ಲೋಕಾರ್ಪಣೆ ಜೊತೆಗೆ ಮುಖ್ಯಮಂತ್ರಿಗಳು ವಿವಿಧ ಇಲಾಖೆಗಳ ಅಡಿಯಲ್ಲಿ ಕೈಗೊಂಡಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು ಮತ್ತು ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಅಲ್ಲದೆ, ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಜೆ.ಜಾರ್ಜ್, ಸ್ಥಳೀಯ ಶಾಸಕರಾದ ಟಿ.ಡಿ. ರಾಜೇಗೌಡ (ಶೃಂಗೇರಿ), ಆನಂದ್ (ಕಡೂರು), ಶ್ರೀನಿವಾಸ್ (ತರೀಕೆರೆ), ಮಾಗಡಿ ಶಾಸಕ ಬಾಲಕೃಷ್ಣ ಹಾಗೂ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಭಾಗವಹಿಸಿದ್ದರು.ವಿಶ್ವವಾಣಿ ಸಂಪಾದಕರಾದ ವಿಶ್ವೇಶ್ವರ ಭಟ್ ಹಾಗೂ ಕೆ‌ಎಸ್‌ಟಿ‌ಡಿಸಿ ಅಧ್ಯಕ್ಷರಾದ ಸರೋವರ್ ಶ್ರೀನಿವಾಸ್ ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

Category
ಕರಾವಳಿ ತರಂಗಿಣಿ