ಬೆಂಗಳೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ಕುಲಪತಿ ವಿರುದ್ಧ ಕ್ರಮ ಹಾಗೂ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರಿಗೆ ರಾಜ್ಯಪಾಲರು ಪತ್ರ ಬರೆದಿದ್ದಾರೆ. ಮಾರ್ಚ್ 24ರಂದು ಕೆಎಸ್‌ಒಯು ಖಾತೆಗಳನ್ನು ಸ್ಥಗಿತಗೊಳಿಸಲು ಎಚ್‌ಡಿಎಫ್‌ಸಿ ಬ್ಯಾಂಕ್ ಸೇರಿದಂತೆ ಕೆಲ ಬ್ಯಾಂಕ್‌ಗಳಿಗೆ ಕಳುಹಿಸಿದ್ದ ಪತ್ರವನ್ನು ತಕ್ಷಣ ಹಿಂಪಡೆಯಬೇಕು. ವಿಶ್ವವಿದ್ಯಾಲಯದ ಕಾನೂನುಬದ್ಧ ಕಾರ್ಯನಿರ್ವಹಣೆಗೆ ಅಡ್ಡಿಯಾಗುವ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಸೂಚಿಸಿದ್ದಾರೆ.
ವಿಶ್ವವಿದ್ಯಾಲಯದ ಅಕ್ರಮಗಳ ಬಗ್ಗೆ ಮಾಹಿತಿ ಇದ್ದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು. ಕಾನೂನುಬದ್ಧ ವ್ಯವಸ್ಥೆ ಮತ್ತು ಸಂವಿಧಾನಾತ್ಮಕ ಮಿತಿಗಳ ಒಳಗೆ ಕಾರ್ಯನಿರ್ವಹಿಸಬೇಕು. ವಿಶ್ವವಿದ್ಯಾಲಯ ಮತ್ತು ಕುಲಪತಿ ಮೇಲೆ ಪರೋಕ್ಷ ಒತ್ತಡ ಹೇರುವ ಪ್ರಯತ್ನ ಮಾಡಬಾರದು. ಇಂತಹ ಕ್ರಮಗಳಿಂದ ವಿಶ್ವವಿದ್ಯಾಲಯ ಹಾಗೂ ನೌಕರರ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ. ಇದೇ ಧೋರಣೆ ಮುಂದುವರಿದರೆ ಉದ್ದೇಶಪೂರ್ವಕ ಹಸ್ತಕ್ಷೇಪ ಎಂದು ಪರಿಗಣಿಸಲಾಗುವುದು. ಈ ಕುರಿತು ಕೈಗೊಂಡ ಕ್ರಮಗಳ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಪತ್ರದಲ್ಲಿ ಹೇಳಿದ್ದಾರೆ. ಮಾರ್ಚ್ 25ರಿಂದ 27ರವರೆಗೆ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಕೆಎಸ್‌ಒಯು ಆವರಣದಲ್ಲಿ 'ಏಕಾತ್ಮ ಮಾನವ ದರ್ಶನ' ಎಂಬ ಅಂತರರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನ ನಡೆದಿತ್ತು. ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಲೋಗೊ ಬಳಸಲಾಗಿತ್ತು. ರಾಜ್ಯಪಾಲರು ಹಾಗೂ ಕೇಂದ್ರ ಸಚಿವರನ್ನು ಆಹ್ವಾನಿಸಲಾಗಿತ್ತು. ಆದರೆ, ಉನ್ನತ ಶಿಕ್ಷಣ ಸಚಿವರನ್ನು ಆಹ್ವಾನಿಸದೇ ಶಿಷ್ಟಾಚಾರ ಉಲ್ಲಂಘಿಸಿದ ಕಾರಣಕ್ಕೆ ಕಾರ್ಯಕ್ರಮ ರದ್ದುಗೊಳಿಸಲು ರಾಜ್ಯ ಸರ್ಕಾರ ಆದೇಶಿಸಿತ್ತು. ಅದನ್ನು ಧಿಕ್ಕರಿಸಿದ್ದ ಕುಲಪತಿ ಶರಣಪ್ಪ ಹಲಸೆ ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದರು. ನಂತರ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. 'ವಿಶ್ವವಿದ್ಯಾಲಯವು ಸ್ಥಳವನ್ನು ಬಾಡಿಗೆ ಆಧಾರದಲ್ಲಿ ನೀಡಿದೆ' ಎಂದು ಕುಲಪತಿ ಉತ್ತರ ನೀಡಿದ್ದರು. ನಂತರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಇಲಾಖೆ ಪತ್ರ ಬರೆದಿತ್ತು.