image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಅನರ್ಹರ ಬಿಪಿಎಲ್ ಕಾರ್ಡ್​ಗಳನ್ನು ತೆಗೆದು, ಅವರಿಗೆ ಎಪಿಎಲ್ ಕಾರ್ಡ್​ಗಳನ್ನು ಕೊಡುತ್ತೇವೆ : ಆಹಾರ ಸಚಿವ ಮುನಿಯಪ್ಪ

ಅನರ್ಹರ ಬಿಪಿಎಲ್ ಕಾರ್ಡ್​ಗಳನ್ನು ತೆಗೆದು, ಅವರಿಗೆ ಎಪಿಎಲ್ ಕಾರ್ಡ್​ಗಳನ್ನು ಕೊಡುತ್ತೇವೆ : ಆಹಾರ ಸಚಿವ ಮುನಿಯಪ್ಪ

ಬೆಂಗಳೂರು: ರಾಜ್ಯದಲ್ಲಿ ಅನರ್ಹ ಬಿಪಿಎಲ್ (BPL) ಕಾರ್ಡ್‌ಗಳ ಹಾವಳಿ ತಡೆಗಟ್ಟಲು ಸರ್ಕಾರ ಬಿಗಿ ಕ್ರಮಕ್ಕೆ ಮುಂದಾಗಿದ್ದು, ಸುಮಾರು 14 ಲಕ್ಷ ಎಪಿಎಲ್ ಕುಟುಂಬಗಳು ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿವೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅಂತಹ ಕಾರ್ಡ್‌ಗಳನ್ನು ಹಂತಹಂತವಾಗಿ ರದ್ದುಗೊಳಿಸಿ, ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತಿಸಲಾಗುವುದು ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.​ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ರಾಜ್ಯದಲ್ಲಿ ಲಕ್ಷಾಂತರ ಮಂದಿ ಅನರ್ಹರು ಬಿಪಿಎಲ್ ಸೌಲಭ್ಯ ಪಡೆಯುತ್ತಿರುವುದು ವರದಿಯಾಗಿದೆ. ವಿಶೇಷವಾಗಿ ಆದಾಯ ತೆರಿಗೆ ಪಾವತಿದಾರರು ಮತ್ತು ಸರ್ಕಾರಿ ನೌಕರರು ಸೇರಿದಂತೆ ಗೈಡ್‌ಲೈನ್ಸ್ ಮೀರಿ ಕಾರ್ಡ್ ಪಡೆದವರನ್ನು ಪತ್ತೆಹಚ್ಚುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಈ ಪರಿಷ್ಕರಣೆ ವೇಳೆ ಯಾವುದೇ ಅರ್ಹ ಬಡ ಕುಟುಂಬಕ್ಕೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

​ಒಂದು ವೇಳೆ ತಾಂತ್ರಿಕ ಕಾರಣಗಳಿಂದ ಅಥವಾ ತಪ್ಪಾಗಿ ಅರ್ಹರ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ, ಅಂತಹವರು ತಕ್ಷಣವೇ ಸಂಬಂಧಪಟ್ಟ ತಹಶೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿಯ ಸತ್ಯಾಸತ್ಯತೆ ಪರಿಶೀಲಿಸಿ ಪುನಃ ಬಿಪಿಎಲ್ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಅರ್ಹರಲ್ಲದವರು ಬಿಪಿಎಲ್‌ನಿಂದ ಹೊರಹೋಗಲಿದ್ದಾರೆಯೇ ಹೊರತು, ಯಾರಿಗೂ ಅನ್ಯಾಯವಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಇದೇ ವೇಳೆ ರಾಜ್ಯದಲ್ಲಿ ಎದುರಾಗಿರುವ ಎಲ್‌ಪಿಜಿ (LPG) ಅಭಾವದ ಕುರಿತು ಪ್ರತಿಕ್ರಿಯಿಸಿದ ಅವರು, ಗ್ಯಾಸ್ ಕೊರತೆಯಿಂದ ಆಟೋ ಚಾಲಕರು ಸೇರಿದಂತೆ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತು ಚರ್ಚಿಸಲು ನಾಳೆ ಉನ್ನತ ಮಟ್ಟದ ಸಭೆ ಕರೆಯಲಾಗಿದ್ದು, ಕೇಂದ್ರ ಸರ್ಕಾರಕ್ಕೂ ಪತ್ರ ಬರೆಯಲಾಗಿದೆ. ಆದ್ಯತೆಯ ಮೇರೆಗೆ ಗ್ಯಾಸ್ ಪೂರೈಸುವಂತೆ ಮನವಿ ಮಾಡಲಾಗಿದ್ದು, ಕೇಂದ್ರದಿಂದ ಬರುವ ಪ್ರತಿಕ್ರಿಯೆ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಸಚಿವರು ಮಾಹಿತಿ ನೀಡಿದರು.

Category
ಕರಾವಳಿ ತರಂಗಿಣಿ