image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಚಿತ್ರದುರ್ಗದಲ್ಲಿ ಪಿಎಸ್‌ಐ ನೇತ್ರಾವತಿ ತಮ್ಮ ಸಿಬ್ಬಂದಿಗೆ ನೀಡಿರುವ ಶಿಕ್ಷೆ ಈಗ ದೊಡ್ಡ ವಿವಾದ!

ಚಿತ್ರದುರ್ಗದಲ್ಲಿ ಪಿಎಸ್‌ಐ ನೇತ್ರಾವತಿ ತಮ್ಮ ಸಿಬ್ಬಂದಿಗೆ ನೀಡಿರುವ ಶಿಕ್ಷೆ ಈಗ ದೊಡ್ಡ ವಿವಾದ!

ಚಿತ್ರದುರ್ಗ : ಶಿಸ್ತಿನ ಇಲಾಖೆ ಎಂದೇ ಕರೆಯಲ್ಪಡುವ ಪೊಲೀಸ್ ಇಲಾಖೆಯಲ್ಲಿ ಮೇಲಾಧಿಕಾರಿಗಳು ಕೆಳಹಂತದ ಸಿಬ್ಬಂದಿಗೆ ಶಿಕ್ಷೆ ನೀಡುವುದು ಹೊಸದೇನಲ್ಲ. ಆದರೆ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ನೇತ್ರಾವತಿ ಅವರು ತಮ್ಮದೇ ಸಿಬ್ಬಂದಿಗೆ ನೀಡಿರುವ ಶಿಕ್ಷೆ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಕರ್ತವ್ಯ ಲೋಪದ ಹೆಸರಿನಲ್ಲಿ ಬರೋಬ್ಬರಿ 12 ಮಂದಿ ಸಿಬ್ಬಂದಿಯನ್ನು ರಣಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷೆ ನೀಡಲಾಗಿದ್ದು, ಇಲಾಖೆಯ ಒಳಗಿನ ಶಿಸ್ತು ಮತ್ತು ಮಾನವೀಯತೆಯ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಸ್ತುತ ತಾಪಮಾನ ಏರಿಕೆಯಾಗಿದ್ದು, ಜನಸಾಮಾನ್ಯರೇ ಹೊರಬರಲು ಭಯಪಡುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ 3 ಗಂಟೆಗಳ ಕಾಲ ಬಂದೂಕು ಹೊತ್ತು ಬಿಸಿಲಿನಲ್ಲಿ ನಿಂತ ಪರಿಣಾಮ, ಶಿಕ್ಷೆ ಅನುಭವಿಸಿದ ಸಿಬ್ಬಂದಿಯ ಆರೋಗ್ಯದಲ್ಲಿ ಏರುಪೇರಾಗಿದೆ. ಕೆಲವರು ತೀವ್ರ ಸುಸ್ತಿನಿಂದ ಬಳಲಿದರೆ, ಇನ್ನು ಕೆಲವರಿಗೆ ತಲೆಸುತ್ತು ಕಾಣಿಸಿಕೊಂಡಿದೆ. ಅಸ್ವಸ್ಥಗೊಂಡ ಕೆಲ ಸಿಬ್ಬಂದಿಯನ್ನು ತಕ್ಷಣವೇ ಹೊಳಲ್ಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಘಟನೆಯಿಂದ ಪೊಲೀಸ್ ಸಿಬ್ಬಂದಿ ತೀವ್ರ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಿಎಸ್‌ಐ ಅವರ ಈ ನಡೆ 'ದರ್ಪ'ದ ಪರಮಾವಧಿ ಎಂದು ಸಿಬ್ಬಂದಿ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಕರ್ತವ್ಯ ನಿರ್ಲಕ್ಷ್ಯ ಮಾಡಿದ್ದರೆ ಇಲಾಖಾ ತನಿಖೆ ನಡೆಸಿ ನೋಟಿಸ್ ನೀಡಬಹುದಿತ್ತು ಅಥವಾ ನಿಯಮಾನುಸಾರ ಕ್ರಮ ಕೈಗೊಳ್ಳಬಹುದಿತ್ತು. ಅದನ್ನು ಬಿಟ್ಟು ಇಂತಹ ಅಮಾನವೀಯ ಶಿಕ್ಷೆ ನೀಡಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಚಿತ್ರದುರ್ಗ ಎಸ್ಪಿ ರಂಜಿತ್ ಬಂಡಾರು ಅವರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಡಿವೈಎಸ್ಪಿ ಗಿರೀಶ್ ಗೌಡ ಅವರಿಗೆ ಸೂಚನೆ ನೀಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಶಿಸ್ತು ಮುಖ್ಯ ನಿಜ, ಆದರೆ ಶಿಕ್ಷೆಯ ಹೆಸರಿನಲ್ಲಿ ಸಿಬ್ಬಂದಿಯ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಪಿಎಸ್‌ಐ ನೇತ್ರಾವತಿ ಅವರ ಈ ನಡೆಗೆ ಸಾರ್ವಜನಿಕ ವಲಯದಲ್ಲೂ ಟೀಕೆ ವ್ಯಕ್ತವಾಗುತ್ತಿದ್ದು, ತನಿಖಾ ವರದಿಯ ನಂತರ ಅವರ ವಿರುದ್ಧ ಯಾವ ರೀತಿಯ ಕ್ರಮ ಜರುಗಿಸಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಾರೆಯಾಗಿ, ರಕ್ಷಣೆ ನೀಡಬೇಕಾದ ಪೊಲೀಸರೇ ತಮ್ಮ ಅಧಿಕಾರಿಯ ದರ್ಪಕ್ಕೆ ಬಲಿಯಾಗಿ ಆಸ್ಪತ್ರೆ ಸೇರಿರುವುದು ಇಲಾಖೆಗೆ ಮುಜುಗರ ತಂದಿಟ್ಟಿದೆ.

Category
ಕರಾವಳಿ ತರಂಗಿಣಿ