image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬಿಜೆಪಿ ಎನ್ನುವುದು ಕೇವಲ ಪಕ್ಷವಲ್ಲ, ಅದೊಂದು ರಾಷ್ಟ್ರೀಯ ಚಳುವಳಿ: ಡಾ. ರವಿ ಸಿ.ಟಿ. ಅಭಿಮತ

ಬಿಜೆಪಿ ಎನ್ನುವುದು ಕೇವಲ ಪಕ್ಷವಲ್ಲ, ಅದೊಂದು ರಾಷ್ಟ್ರೀಯ ಚಳುವಳಿ: ಡಾ. ರವಿ ಸಿ.ಟಿ. ಅಭಿಮತ

​ಚಿಕ್ಕಮಗಳೂರು: ವಿವಿಧ ರಾಜಕೀಯ ಸಿದ್ಧಾಂತಗಳ ಗುಂಪುಗಳು ಒಗ್ಗೂಡಿ ಜನತಾ ಪಾರ್ಟಿಯ ಉದಯವಾಯಿತು. ಆ ಮೂಲಕ ಜನರ ವಿಶ್ವಾಸ ಗೆದ್ದು ಮೊರಾರ್ಜಿ ದೇಸಾಯಿ ಅವರು ಪ್ರಧಾನಿಯಾದರು. ಆದರೆ, ಕಾಲಕ್ರಮೇಣ ಆ ಗುಂಪುಗಳು ಜನರ ಆಶೋತ್ತರಗಳನ್ನು ಮರೆತು ಸ್ವಹಿತಾಸಕ್ತಿಗಾಗಿ ಕಾರ್ಯನಿರ್ವಹಿಸಲು ಆರಂಭಿಸಿದವು. ಇಂತಹ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗಿನ ಅವಿನಾಭಾವ ಸಂಬಂಧವನ್ನು ಉಳಿಸಿಕೊಳ್ಳಲು ಮತ್ತು ರಾಷ್ಟ್ರೀಯ ಹಿತಾಸಕ್ತಿ ಕಾಯಲು 1980ರ ಏಪ್ರಿಲ್ 6ರಂದು ಭಾರತೀಯ ಜನತಾ ಪಾರ್ಟಿಯನ್ನು ಸ್ಥಾಪಿಸಲಾಯಿತು ಎಂದು ವಿಧಾನ ಪರಿಷತ್ ಸದಸ್ಯರಾದ ಡಾ. ರವಿ ಸಿ.ಟಿ. ತಿಳಿಸಿದರು.

​ಜಿಲ್ಲಾ ಬಿಜೆಪಿ ಕಚೇರಿ 'ಪಾಂಚಜನ್ಯ'ದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಪಕ್ಷದ ಧ್ವಜಾರೋಹಣ ನೆರವೇರಿಸಿ, ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ಅವರು ಮಾತನಾಡುತ್ತಿದ್ದರು. 1984ರ ಚುನಾವಣೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್.ಕೆ. ಅಡ್ವಾಣಿಯವರಂತಹ ನಾಯಕರು ಸೋಲು ಕಂಡಾಗ ಅನೇಕರು ಲೇವಡಿ ಮಾಡಿದ್ದರು. ಆ ಸಂದರ್ಭದಲ್ಲಿ ಅಟಲ್ ಜೀ ಅವರು 'ನ ದೈನ್ಯಂ, ನ ಪಲಾಯನಂ' ಎಂದು ಘೋಷಿಸುವ ಮೂಲಕ ಸೋಲಿಗೆ ಎದೆಗುಂದದೆ ಹೋರಾಟ ಮುಂದುವರಿಸಿದರು. ರಾಮಜನ್ಮಭೂಮಿ ಚಳುವಳಿಯ ಫಲವಾಗಿ 1989ರಲ್ಲಿ ಬಿಜೆಪಿ 83 ಸ್ಥಾನಗಳನ್ನು ಗೆದ್ದು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿತು ಎಂದು ಅವರು ಸ್ಮರಿಸಿದರು.

​1999ರಲ್ಲಿ ಅಧಿಕಾರಕ್ಕೆ ಬಂದ ಅಟಲ್ ಬಿಹಾರಿ ವಾಜಪೇಯಿ ಅವರು ಸುಶಾಸನ ಎಂದರೆ ಏನು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟರು. ಸರ್ವಶಿಕ್ಷಾ ಅಭಿಯಾನ, ಸುವರ್ಣ ಚತುಷ್ಪಥ ರಸ್ತೆ ಯೋಜನೆ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಗೆ ವೇಗ ನೀಡಿದರು. ಒಂದು ಕಾಲದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಚಳುವಳಿಯ ಕೇಂದ್ರವಾಗಿತ್ತು, ಆದರೆ ಸ್ವಾತಂತ್ರ್ಯಾನಂತರ ಅದು ಒಂದು ಕುಟುಂಬದ ಹಿತಾಸಕ್ತಿಯ ಪಕ್ಷವಾಗಿ ಬದಲಾಯಿತು. ಆ ಶೂನ್ಯವನ್ನು ತುಂಬಲು ಉದಯಿಸಿದ್ದೇ ಬಿಜೆಪಿ ಎಂಬ ರಾಷ್ಟ್ರೀಯ ಚಳುವಳಿ ಎಂದು ರವಿ ಸಿ.ಟಿ. ವಿಶ್ಲೇಷಿಸಿದರು.

​ದೇಶದ ಏಕತೆ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದ ಆರ್ಟಿಕಲ್ 370 ಅನ್ನು ತೆರವುಗೊಳಿಸುವ ಮೂಲಕ ಬಿಜೆಪಿ ರಾಷ್ಟ್ರೀಯ ಹಿತಾಸಕ್ತಿಯನ್ನು ಎತ್ತಿ ಹಿಡಿದಿದೆ. ಕಾಂಗ್ರೆಸ್‌ನಿಂದ ಕಡೆಗಣಿಸಲ್ಪಟ್ಟಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ಸ್ಮರಣೆಗಾಗಿ ಪಂಚತೀರ್ಧಗಳನ್ನು ನಿರ್ಮಿಸಿದ ಹೆಗ್ಗಳಿಕೆ ಬಿಜೆಪಿಯದ್ದು. ಇಂದು ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಡಿಜಿಟಲ್ ಕ್ರಾಂತಿ ಹಾಗೂ ಮೂಲಸೌಕರ್ಯ ಕ್ಷೇತ್ರದಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ. 2047ರ ವೇಳೆಗೆ ಭಾರತವು ಜಗತ್ತಿನ ಪರಮೋಚ್ಚ ಶಕ್ತಿಯಾಗಬೇಕು ಎನ್ನುವುದೇ ನಮ್ಮ ಕನಸು ಎಂದು ಅವರು ಆಶಯ ವ್ಯಕ್ತಪಡಿಸಿದರು.

​ಇದೇ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ಕಾಮಧೇನು ವಾಸುದೇವ್ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಎಂ.ಆರ್. ದೇವರಾಜಶೆಟ್ಟಿ, ಮುಖಂಡರಾದ ಕೋಟೆ ರಂಗನಾಥ್, ಸಿ.ಆರ್. ಪ್ರೇಮಕುಮಾರ್, ವೀಣಾಶೆಟ್ಟಿ, ಕವೀಶ್, ರವೀಂದ್ರ ಬೆಳವಾಡಿ, ಡಾ. ನರೇಂದ್ರ, ಪುಷ್ಪರಾಜ್, ಜಿ.ಎನ್. ವಿಜಯಕುಮಾರ್ ಸೇರಿದಂತೆ ಅನೇಕ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ