ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ಕೃಷಿ ಭೂಮಿ ಸ್ವಾಧೀನ ಕೈ ಬಿಡುವಂತೆ ರೈತ ಸಂಘವು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರೆ, ಮತ್ತೊಂದೆಡೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಒಂದು ಎಕರೆಗೆ ₹ 1.20 ಕೋಟಿ ಭೂ ಪರಿಹಾರ ನಿಗದಿಗೊಳಿಸಲಾಗಿದೆ. 'ಸೂಕ್ತ ದರ ನೀಡಿದರೆ ಭೂಮಿ ನೀಡಲು ಸಿದ್ಧ' ಎನ್ನುತ್ತಿರುವ ಜಂಗಮಕೋಟೆ ಹೋಬಳಿ ಕೆಐಎಡಿಬಿ ರೈತ ಪರ ಹೋರಾಟ ಸಮಿತಿ ಸದಸ್ಯರು ಹಾಗೂ ಕೆಲವು ರೈತರ ಜೊತೆ ಬೆಂಗಳೂರಿನಲ್ಲಿ ಕೆಐಎಡಿಬಿ ಅಧಿಕಾರಿಗಳು ಸಭೆ ನಡೆಸಿದರು.
ಅರಿಕೆರೆ, ಸಂಜೀವಪುರ, ಕುಲಿಮೆ ಹೊಸೂರು ಗ್ರಾಮಗಳ ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು. ದರ ನಿಗದಿ ಸಂಬಂಧ ಏ.10ರವರೆಗೆ ಕೆಐಎಡಿಬಿ ಅಧಿಕಾರಿಗಳು ಒಂದೊಂದು ಗ್ರಾಮಗಳ ರೈತರ ಸಭೆ ನಡೆಸಲಿದ್ದಾರೆ. ಸರ್ಕಾರ ಪ್ರತಿ ಎಕರೆಗೆ ₹ 1.20 ಕೋಟಿ ಭೂ ಪರಿಹಾರ ನಿಗದಿಪಡಿಸಿದೆ. ಈ ದರವನ್ನು ಇನ್ನೂ ಹೆಚ್ಚಿಸಬೇಕು. ಪರಿಹಾರವನ್ನು ಒಂದೇ ಕಂತಿನಲ್ಲಿ ರೈತರ ಖಾತೆಗಳಿಗೆ ಜಮೆ ಮಾಡಬೇಕು ಎಂದು ಈ ಸಭೆಯಲ್ಲಿ ಪಾಲ್ಗೊಂಡಿದ್ದ ಕೆಐಎಡಿಬಿ ರೈತ ಪರ ಹೋರಾಟ ಸಮಿತಿಯ ಭಕ್ತರಹಳ್ಳಿ ಪ್ರತೀಶ್ ತಿಳಿಸಿದರು. ಕೆಐಎಡಿಬಿಯು ರೈತರ ಜಮೀನು ಸ್ವಾಧೀನಕ್ಕೆ ಪಡೆದು ಸೂಕ್ತ ದರ ನೀಡಬೇಕು ಎಂದು ಜಂಗಮಕೋಟೆ ಹೋಬಳಿ ಕೆಐಎಡಿಬಿ ರೈತ ಪರ ಹೋರಾಟ ಸಮಿತಿಯೂ ಜಿಲ್ಲಾಡಳಿತ ಭವನದ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದೆ.