ಬೆಳಗಾವಿ : ಉತ್ತರ ಕರ್ನಾಟಕದ ಜನತೆಗೆ ಹಾಗೂ ಈ ಭಾಗಕ್ಕೆ ರೈಲಿನಲ್ಲಿ ಪ್ರಯಾಣಿಸುವವರಿಗೆ ನೈಋತ್ಯ ರೈಲ್ವೆಯು ಹೊಸ ವರ್ಷದ ಭರ್ಜರಿ ಉಡುಗೊರೆಯೊಂದನ್ನು ನೀಡಿದೆ. ಇಷ್ಟು ದಿನ 'ವಿಶೇಷ ರೈಲು'ಗಳಾಗಿ ಸಂಚರಿಸುತ್ತಿದ್ದ ಮೂರು ಪ್ರಮುಖ ರೈಲುಗಳನ್ನು ಇನ್ಮುಂದೆ 'ಖಾಯಂ ರೈಲು'ಗಳಾಗಿ ಪರಿವರ್ತಿಸಲು ರೈಲ್ವೆ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಬದಲಾವಣೆಯಿಂದಾಗಿ ಟಿಕೆಟ್ ದರದಲ್ಲಿ ಸುಮಾರು ಶೇಕಡಾ 25 ರಿಂದ 30 ರಷ್ಟು ಇಳಿಕೆಯಾಗಲಿದ್ದು, ಸಾಮಾನ್ಯ ಪ್ರಯಾಣಿಕರಿಗೆ ದೊಡ್ಡ ಮಟ್ಟದ ಆರ್ಥಿಕ ರಿಲೀಫ್ ಸಿಕ್ಕಂತಾಗಿದೆ. ಈ ಹಿಂದೆ ಇವು ವಿಶೇಷ ರೈಲುಗಳಾಗಿದ್ದರಿಂದ ಹೆಚ್ಚಿನ ದರವನ್ನು ವಿಧಿಸಲಾಗುತ್ತಿತ್ತು. ಈಗ ಇವು ಸಾಮಾನ್ಯ ರೈಲುಗಳಾಗಿ ಬದಲಾಗಿರುವುದರಿಂದ, ಸ್ಲೀಪರ್ ಹಾಗೂ ಎಸಿ ಕೋಚ್‌ಗಳ ಟಿಕೆಟ್ ದರ ಗಣನೀಯವಾಗಿ ಕಡಿಮೆಯಾಗಲಿದೆ. ಇದರಿಂದ ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಗದಗ, ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು ಹಾಗೂ ಯಾದಗಿರಿ ಸೇರಿದಂತೆ ಒಟ್ಟು 8ಕ್ಕೂ ಹೆಚ್ಚು ಜಿಲ್ಲೆಗಳ ಜನರಿಗೆ ನೇರ ಲಾಭವಾಗಲಿದೆ. ವಿಶೇಷವಾಗಿ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಸಣ್ಣ ವ್ಯಾಪಾರಿಗಳಿಗೆ ಈ ನಿರ್ಧಾರವು ವರದಾನವಾಗಲಿದೆ. ಈ ಐತಿಹಾಸಿಕ ನಿರ್ಧಾರದಿಂದ ಹೈದರಾಬಾದ್ ಮತ್ತು ತೆಲಂಗಾಣ ಭಾಗಕ್ಕೆ ಪ್ರಯಾಣಿಸುವವರಿಗೆ ಕಡಿಮೆ ವೆಚ್ಚದಲ್ಲಿ ಸುಲಭ ಪ್ರಯಾಣ ಸಾಧ್ಯವಾಗಲಿದ್ದು, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೊಸ ವೇಗ ಸಿಕ್ಕಂತಾಗಿದೆ.
ರೈಲುಗಳ ವೇಳಾಪಟ್ಟಿ ಹೀಗಿವೆ
ರೈಲು ಸಂಖ್ಯೆ 17071 (ಹೈದರಾಬಾದ್ - ಬೆಳಗಾವಿ): ಪ್ರತಿ ಗುರುವಾರ ಸಂಜೆ 4:30ಕ್ಕೆ ಹೊರಟು, ಶುಕ್ರವಾರ ಬೆಳಿಗ್ಗೆ 10:30ಕ್ಕೆ ಬೆಳಗಾವಿ ತಲುಪಲಿದೆ.
ರೈಲು ಸಂಖ್ಯೆ 17072 (ಬೆಳಗಾವಿ - ಹೈದರಾಬಾದ್): ಪ್ರತಿ ಶುಕ್ರವಾರ ಮಧ್ಯಾಹ್ನ 1:00 ಗಂಟೆಗೆ ಹೊರಟು, ಶನಿವಾರ ಬೆಳಿಗ್ಗೆ 7:00 ಗಂಟೆಗೆ ಹೈದರಾಬಾದ್ ತಲುಪಲಿದೆ.
ರೈಲು ಸಂಖ್ಯೆ 17073 (ಸಿಕಂದರಾಬಾದ್ - ಬೆಳಗಾವಿ): ಪ್ರತಿ ಸೋಮವಾರ ಸಂಜೆ 4:30ಕ್ಕೆ ಹೊರಟು, ಮಂಗಳವಾರ ಬೆಳಿಗ್ಗೆ 10:30ಕ್ಕೆ ಬೆಳಗಾವಿ ತಲುಪಲಿದೆ.
ರೈಲು ಸಂಖ್ಯೆ 17074 (ಬೆಳಗಾವಿ - ಸಿಕಂದರಾಬಾದ್): ಪ್ರತಿ ಮಂಗಳವಾರ ಮಧ್ಯಾಹ್ನ 1:00 ಗಂಟೆಗೆ ಹೊರಟು, ಬುಧವಾರ ಬೆಳಿಗ್ಗೆ 7:15ಕ್ಕೆ ಸಿಕಂದರಾಬಾದ್ ತಲುಪಲಿದೆ.
ರೈಲು ಸಂಖ್ಯೆ 17075 (ಚೇರ್ಲಪಲ್ಲಿ - ಬೆಳಗಾವಿ): ಪ್ರತಿ ಶನಿವಾರ ಸಂಜೆ 4:00 ಗಂಟೆಗೆ ಹೊರಟು, ಭಾನುವಾರ ಬೆಳಿಗ್ಗೆ 10:30ಕ್ಕೆ ಬೆಳಗಾವಿ ತಲುಪಲಿದೆ.
ರೈಲು ಸಂಖ್ಯೆ 17076 (ಬೆಳಗಾವಿ - ಚೇರ್ಲಪಲ್ಲಿ): ಪ್ರತಿ ಭಾನುವಾರ ಮಧ್ಯಾಹ್ನ 1:00 ಗಂಟೆಗೆ ಹೊರಟು, ಸೋಮವಾರ ಬೆಳಿಗ್ಗೆ 8:45ಕ್ಕೆ ಚೇರ್ಲಪಲ್ಲಿ ತಲುಪಲಿದೆ.