ಚಾಮರಾಜನಗರ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಕುಟುಂಬ ಸಮೇತರಾಗಿ ಬಿಳಿಗಿರಿರಂಗನ ಬೆಟ್ಟ ಮತ್ತು ಹರಳುಕೋಟೆ ಆಂಜನೇಯ ಸನ್ನಿಧಿಗೆ ಭೇಟಿ ನೀಡಿದರು.
ಯಳಂದೂರು ತಾಲೂಕಿನಲ್ಲಿರುವ ಪ್ರಸಿದ್ಧ ಯಾತ್ರಾಸ್ಥಳವಾದ ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿ ರಂಗನಾಥ ಸ್ವಾಮಿಗೆ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿ, ಅರ್ಚನೆ ಮಾಡಿಸಿದರು. ಬಳಿಕ, ಬಿಳಿಗಿರಿರಂಗನ ಬೆಟ್ಟದಿಂದ ಕೆ.ಗುಡಿಗೆ ಆಗಮಿಸಿ ಅರಣ್ಯ ಸೌಂದರ್ಯ ವೀಕ್ಷಿಸಿದರು. ಮಧ್ಯಾಹ್ನ ಚಾಮರಾಜನಗರದ ಹರಳುಕೋಟೆ ಆಂಜನೇಯ ಸನ್ನಿಧಿಗೆ ಭೇಟಿ ನೀಡಿ, ಹನುಮನ ದರ್ಶನ ಪಡೆದು ಅರ್ಚನೆ ಮಾಡಿಸಿದ್ದಾರೆ.
ಹರಳುಕೋಟೆ ಆಂಜನೇಯಸ್ವಾಮಿ ದೇಗುಲವು ಬಬ್ರುವಾಹನನಿಂದ ಸ್ಥಾಪಿತಗೊಂಡ ಮೂರ್ತಿ ಎಂಬ ಪೌರಾಣಿಕ ಐತಿಹ್ಯವಿದೆ. ಈ ಹಿಂದೆ, ಹರಳುಕೋಟೆ ಆಂಜನೇಯ ಸ್ವಾಮಿ ಸನ್ನಿಧಾನಕ್ಕೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದ ರಂಜನ್ ಗೊಗೊಯ್, ಶರದ್ ಅರವಿಂದ್ ಬೊಬ್ಡೆ ಭೇಟಿ ಕೊಟ್ಟು ನಮಿಸಿದ್ದರು.