ಮಂಡ್ಯ: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ‘ದಿಶಾ’ ಸಭೆಯು ಅನಿರೀಕ್ಷಿತ ಹೈಡ್ರಾಮಾಗೆ ಸಾಕ್ಷಿಯಾಯಿತು. ಸಭೆಯ ನಡುವೆಯೇ ನುಗ್ಗಿದ ವ್ಯಕ್ತಿಯೊಬ್ಬರು ತಮ್ಮ ಕೌಟುಂಬಿಕ ಸಮಸ್ಯೆಯನ್ನು ಮುಂದಿಟ್ಟು ಕುಮಾರಸ್ವಾಮಿ ಅವರ ಕಾಲಿಗೆ ಬಿದ್ದು ನ್ಯಾಯಕ್ಕಾಗಿ ಆಗ್ರಹಿಸಿದ ಘಟನೆ ನಡೆದಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಕೆಲಕಾಲ ದಿಗಿಲುಗೊಳಿಸಿತು.
ಮಂಡ್ಯ ಜಿಲ್ಲೆಯ ಮಳವಳ್ಳಿ ಮೂಲದ ವ್ಯಕ್ತಿಯೊಬ್ಬರು ಸಭೆಯ ಮಧ್ಯೆ ದಿಢೀರ್ ಪ್ರವೇಶಿಸಿ, ತಮ್ಮ ಪತ್ನಿ ಮತ್ತು ಅನ್ನದಾನಿ ಎಂಬುವವರ ನಡುವೆ ಅಕ್ರಮ ಸಂಬಂಧವಿದೆ ಎಂದು ಗಂಭೀರ ಆರೋಪ ಮಾಡಿದರು. ಈ ವಿಷಯವಾಗಿ ಈ ಹಿಂದೆಯೇ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಭಾವಿಗಳ ಒತ್ತಡದಿಂದ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಮಾತನಾಡುತ್ತಲೇ ಭಾವುಕರಾದ ಆ ವ್ಯಕ್ತಿ, ನೇರವಾಗಿ ವೇದಿಕೆಯತ್ತ ಧಾವಿಸಿ ಹೆಚ್.ಡಿ. ಕುಮಾರಸ್ವಾಮಿ ಅವರ ಕಾಲಿಗೆ ಬಿದ್ದು, "ನನಗೆ ನ್ಯಾಯ ಕೊಡಿಸಿ, ಇಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ" ಎಂದು ಕಣ್ಣೀರು ಹಾಕಿದರು.
ಕೂಡಲೇ ಎಚ್ಚೆತ್ತ ಭದ್ರತಾ ಸಿಬ್ಬಂದಿ ಆ ವ್ಯಕ್ತಿಯನ್ನು ಸಮಾಧಾನಪಡಿಸಿ ಪಕ್ಕಕ್ಕೆ ಕರೆದೊಯ್ದರು. ಸಭೆಯಲ್ಲಿದ್ದ ಸಚಿವರು ಹಾಗೂ ಶಾಸಕರು ಈ ಘಟನೆಯಿಂದ ಕೆಲಕಾಲ ಸ್ತಬ್ದರಾದರು. ಪರಿಸ್ಥಿತಿಯನ್ನು ನಿಭಾಯಿಸಿದ ಕುಮಾರಸ್ವಾಮಿ ಅವರು, ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸುವಂತೆ ವೇದಿಕೆಯಲ್ಲಿದ್ದ ಪೊಲೀಸ್ ವರಿಷ್ಠಾಧಿಕಾರಿಗಳಿಗೆ (SP) ಸೂಚನೆ ನೀಡಿದರು. ಸಾರ್ವಜನಿಕರ ಅಹವಾಲುಗಳನ್ನು ಆಲಿಸಲು ಸಭೆ ಕರೆದಾಗ ಇಂತಹ ಗಂಭೀರ ವೈಯಕ್ತಿಕ ನೋವುಗಳು ಹೊರಬರುತ್ತಿರುವುದು ಜಿಲ್ಲಾಡಳಿತದ ಕಾರ್ಯವೈಖರಿಯ ಬಗ್ಗೆ ಚರ್ಚೆಗೆ ನಾಂದಿ ಹಾಡಿದೆ. ಮಂಡ್ಯದ ಈ ದಿಶಾ ಸಭೆಯ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿವೆ.