ಆನೇಕಲ್ : ಇತ್ತೀಚಿಗೆ ಜಿಗಣಿಯಲ್ಲಿ ಪಾಕಿಸ್ತಾನಿ ಪ್ರಜೆ ಮತ್ತು ಆತನ ಪತ್ನಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಈ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಖರ ಮಾಹಿತಿ ಮೇರೆಗೆ ಮತ್ತೆ ಮೂವರು ಪಾಕ್ ಪ್ರಜೆಗಳನ್ನು ಬೆಂಗಳೂರಿನ ಪೀಣ್ಯದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇಬ್ಬರು ಮಹಿಳೆಯರು, ಓರ್ವ ಪುರುಷನನ್ನು ಬಂಧಿಸಿದ ಜಿಗಣಿ ಪೊಲೀಸರ ತಂಡ, ವಿಚಾರಣೆ ನಡೆಸಿ ಗುರುವಾರ ಆನೇಕಲ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದೆ. ಕಳೆದ ಭಾನುವಾರ ಬಂಧಿಸಲಾಗಿದ್ದ ಪಾಕ್ ಪ್ರಜೆ ರಶೀದ್ ಅಲ್ ಸಿದ್ದಿಕಿಯೊಂದಿಗಿನ ಇವರ ಸಂಪರ್ಕದ ಜಾಡು ಹಿಡಿದ ಜಿಗಣಿ ಪೊಲೀಸರು ಪೀಣ್ಯದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
ಪ್ರಕರಣದ ಹೆಚ್ಚಿನ ತನಿಖೆಗೆ ಈಗಾಗಲೇ ನಾಲ್ಕು ಪೊಲೀಸ್ ತಂಡಗಳನ್ನು ರಚನೆ ಮಾಡಲಾಗಿದ್ದು, ಶಂಕಿತರ ಪತ್ತೆಗೆ ಕ್ರಮ ಕೈಗೊಂಡಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.
ಈ ಕುರಿತು ಮಾತನಾಡಿದ್ದ ಗೃಹ ಸಚಿವ ಜಿ.ಪರಮೇಶ್ವರ್, "ನಮಗೆ ಬಂದ ಮಾಹಿತಿ ಪ್ರಕಾರ ಅವರು ನಾಲ್ಕೂ ಜನ ಹತ್ತು ವರ್ಷದಿಂದ ಭಾರತದಲ್ಲಿದ್ದಾರೆ. ಬೆಂಗಳೂರಿಗೆ ಬಂದು ಒಂದು ವರ್ಷವಾಗಿದೆ. ಕಸ್ಟಡಿಗೆ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ. ಹತ್ತು ವರ್ಷದಿಂದ ಅವರು ಇಲ್ಲಿದ್ದರೆ, ಯಾಕೆ ಗುಪ್ತಚರ ಇಲಾಖೆಗೆ ಗೊತ್ತಾಗಿಲ್ಲ? ಪಾಸ್‌ಪೋರ್ಟ್ ಹಾಗೂ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಹೆಸರು ಬದಲಾಯಿಸಿಕೊಂಡು ರೆಸ್ಟೋರೆಂಟ್ ನಡೆಸುತ್ತಿದ್ದಾರೆ ಅಂತ ಮಾಹಿತಿ ಬಂದಿದೆ. ತನಿಖೆಯ ಬಳಿತ ಎಲ್ಲ ವಿಚಾರಗಳು ಗೊತ್ತಾಗಲಿವೆ'' ಎಂದು ಹೇಳಿದ್ದರು.