ಮೈಸೂರು: ಮೈಸೂರು ದಸರಾ ಕುಸ್ತಿ ಪಂದ್ಯಾವಳಿಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಚಾಲನೆ ನೀಡಿದರು.
ದೊಡ್ಡಕರೆ ಮೈದಾನ ಆವರಣದ ಶ್ರೀ ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ದಾವಣಗೆರೆ ಕ್ರೀಡಾನಿಲಯದ ಪೈಲ್ವಾನ್ ರಾಘವೇಂದ್ರ ಮತ್ತು ಮೈಸೂರಿನ ಮಹದೇವಪುರ ಪೈಲ್ವಾನ್ ವಿಕಾಶ್ ಅವರ ಭುಜ ತಟ್ಟುವ ಮೂಲಕ ಪಂದ್ಯಾವಳಿಗೆ ವಿಧ್ಯುಕ್ತ ಚಾಲನೆ ಸಿಕ್ಕಿತು. ಬಾಲಕಿಯರ ಮೊದಲೆರಡು ಕುಸ್ತಿ ಪಂದ್ಯದಲ್ಲಿ ಮಂಡ್ಯದ ಪೈಲ್ವಾನ್ ಸುಹಾನ ಬಾನು ವಿರುದ್ಧ ಗಾಣಿಗನಕೊಪ್ಪಲುವಿನ ಪೈಲ್ವಾನ್ ನಂದಿನಿ ಹಾಗೂ ಮಳವಳ್ಳಿಯ ಪೈಲ್ವಾನ್ ಎಂ.ಕೆ.ಮೋನಿಕಾ ವಿರುದ್ಧ ರಮ್ಮನಹಳ್ಳಿಯ ಪೈಲ್ವಾನ್ ಯಶಸ್ವಿನಿ ಜಯಭೇರಿ ಬಾರಿಸಿದರು. ಈ ಬಾರಿ ದಸರಾ ಮಹೋತ್ಸವದಲ್ಲಿ ಕುಸ್ತಿ ಪಂದ್ಯಾವಳಿ ಅಭಿಮಾನಿಗಳಿಗೆ ರೋಮಾಂಚನ ನೀಡಿತು.
ಚಾಮುಂಡೇಶ್ವರಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟಕ್ಕೂ ಚಾಲನೆ ದೊರೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕ್ರೀಡಾಪಟುಗಳಲ್ಲಿ ಶ್ರಮ, ಏಕಾಗ್ರತೆ, ಗುರಿ, ಗುಣಮಟ್ಟದ ತರಬೇತಿ ಸಿಕ್ಕಾಗ ಮಾತ್ರ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು.
ಯುವಜನತೆ ಕ್ರೀಡೆಯೊಂದಿಗೆ ಓದಿನ ಕಡೆಗೂ ಸೂಕ್ತ ಗಮನ ಹರಿಸಬೇಕು. ಎಲ್ಲ ಕ್ರೀಡಾಪಟುಗಳನ್ನು ಶುಭ ಹಾರೈಸುತ್ತೇನೆ. ಹರ್ಮನ್ ಪ್ರಿತ್ ಸಿಂಗ್ ಅವರು ಭಾರತ ಹಾಕಿ ತಂಡದ ನಾಯಕರಾಗಿದ್ದು, ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. 200ಕ್ಕೂ ಹೆಚ್ಚು ಗೋಲುಗಳನ್ನು ಬಾರಿಸಿರುವ ಕೀರ್ತಿ ಅವರಿಗೆ ಸಲ್ಲುತ್ತದೆ. ಕಳೆದ ಒಲಿಂಪಿಕ್ಸ್ನಲ್ಲಿ ಇವರ ನಾಯಕತ್ವದಲ್ಲಿ ಭಾರತ ಕಂಚಿನ ಪದಕ ಗೆಲ್ಲಲು ಸಾಧ್ಯವಾಯಿತು. ಮುಂದಿನ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವಂತಾಗಲಿ ಎಂದು ಸಿಎಂ ಹಾರೈಸಿದರು.