ದಾವಣಗೆರೆ: "ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗಿದ್ದು, ಈ ಅವಧಿಯಲ್ಲಿ ಸರ್ಕಾರ ಒಂದೇ ಒಂದು ಒಳ್ಳೆಯ ಕಾರಣಕ್ಕೆ ಸುದ್ದಿಯಾಗಲಿಲ್ಲ," ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ವಾಗ್ದಾಳಿ ನಡೆಸಿದರು. ದಾವಣಗೆರೆಯಲ್ಲಿ ಇಂದು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಸರ್ಕಾರದ 'ದುರಾಡಳಿತದ ಚಾರ್ಜ್‌ಶೀಟ್' ಬಿಡುಗಡೆ ಮಾಡಿ ಅವರು ಮಾತನಾಡಿದರು. ಈ ಮೂರು ವರ್ಷಗಳ ಅವಧಿಯು ಕೇವಲ ಭ್ರಷ್ಟಾಚಾರ, ಬೆಲೆ ಏರಿಕೆ ಮತ್ತು ದುರಾಡಳಿತದಿಂದಲೇ ಕೂಡಿದೆ ಎಂದು ಅವರು ಟೀಕಿಸಿದರು.
ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕವು ಡ್ರಗ್ಸ್ ಮಾಫಿಯಾ, ದರೋಡೆ ಮತ್ತು ಸರಣಿ ಹಗರಣಗಳಿಂದ ದೇಶಮಟ್ಟದಲ್ಲಿ ಸುದ್ದಿಯಾಗಿದೆ. ರೈತರ ಆತ್ಮಹತ್ಯೆಯಲ್ಲಿ ರಾಜ್ಯವು ದೇಶದಲ್ಲೇ ಎರಡನೇ ಸ್ಥಾನಕ್ಕೆ ತಲುಪಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ, ಬಾಣಂತಿಯರು ಮತ್ತು ಹಸುಗೂಸುಗಳ ಸರಣಿ ಸಾವುಗಳು ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿವೆ. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಅತಿಥಿ ಉಪನ್ಯಾಸಕರು ನಿರಂತರವಾಗಿ ಬೀದಿಗೆ ಇಳಿದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ದೂರಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಬಗ್ಗೆ ಪ್ರಸ್ತಾಪಿಸಿದ ರವಿ, "ಸಮುದಾಯದ ಅಭಿವೃದ್ಧಿಗೆ ಬಳಕೆಯಾಗಬೇಕಿದ್ದ ಹಣವನ್ನು ಮಂತ್ರಿಯೊಬ್ಬರು ಹೆಂಡತಿಗೆ ಒಡವೆ ಕೊಡಿಸಲು ಮತ್ತು ಚುನಾವಣೆಗೆ ಮದ್ಯ ಪೂರೈಸಲು ಬಳಸಿಕೊಂಡಿದ್ದಾರೆ. ಇದು ಮರ್ಯಾದಸ್ಥರು ಮಾಡುವ ಕೆಲಸವೇ?" ಎಂದು ಪ್ರಶ್ನಿಸಿದರು. ಹಿಂದೆ ಬಿಜೆಪಿ ಮೇಲೆ 40% ಕಮಿಷನ್ ಆರೋಪ ಮಾಡಿದ್ದ ಕಾಂಗ್ರೆಸ್, ಈಗ ಸ್ವತಃ ಗುತ್ತಿಗೆದಾರರಿಂದಲೇ 60% ಕಮಿಷನ್ ಆರೋಪ ಎದುರಿಸುತ್ತಿದೆ ಎಂದು ಅವರು ಕುಟುಕಿದರು.
ಬೆಲೆ ಏರಿಕೆಯ ಬಗ್ಗೆ ಅಂಕಿಅಂಶಗಳನ್ನು ನೀಡಿದ ಅವರು, "2023ಕ್ಕೂ ಮುನ್ನ 39 ರೂಪಾಯಿ ಇದ್ದ ಹಾಲಿನ ಬೆಲೆ ಈಗ 48 ರೂಪಾಯಿಗೆ ಏರಿದೆ. ಪೆಟ್ರೋಲ್ ಮೇಲೆ ಸೆಸ್ ಹಾಕಿ ಜನರಿಗೆ ಹೊರೆಯುಂಟು ಮಾಡಲಾಗಿದೆ. ಬಸ್ ದರದಲ್ಲಿ 15% ಮತ್ತು ಮೆಟ್ರೋ ದರದಲ್ಲಿ 50% ಏರಿಕೆ ಮಾಡಲಾಗಿದೆ. ವಿದ್ಯುತ್ ದರವನ್ನು ಭೀಕರವಾಗಿ ಏರಿಸುವ ಮೂಲಕ ಸಾಮಾನ್ಯ ಜನರ ಜೀವನ ಹೈರಾಣಾಗಿಸಲಾಗಿದೆ," ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಲದ ನೀತಿಯನ್ನು ಟೀಕಿಸಿದ ಅವರು, ಕಳೆದ 30 ವರ್ಷಗಳಲ್ಲಿ ಎಲ್ಲಾ ಮುಖ್ಯಮಂತ್ರಿಗಳು ಮಾಡಿದ ಸಾಲ ಒಂದು ತೂಕವಾದರೆ, ಸಿದ್ದರಾಮಯ್ಯನವರು ಮಾಡಿದ ಸಾಲವೇ ಮತ್ತೊಂದು ತೂಕವಾಗಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಮತದಾರರು ಈ ಬಾರಿ ಭ್ರಷ್ಟ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.