ಬೆಂಗಳೂರು : ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉಂಟಾಗಿರುವ ಅಸ್ಥಿರತೆಯು ಸದ್ಯ ರಾಜ್ಯದ ಕೃಷಿ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮ ಕಾಯ್ದುಕೊಳ್ಳಲು ಕೃಷಿ ಇಲಾಖೆ ಮುಂದಾಗಿದೆ. 2026ರ ಮುಂಗಾರು ಹಂಗಾಮಿನಲ್ಲಿ ರೈತರಿಗೆ ರಸಗೊಬ್ಬರದ ಕೊರತೆಯಾಗದಂತೆ ಮತ್ತು ಕಾಳಸಂತೆ ಮಾರಾಟವಾಗವುದನ್ನು ತಡೆಯುವ ನಿಟ್ಟಿನಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ಗೊಬ್ಬರ ಉತ್ಪಾದನೆಗೆ ಅಗತ್ಯವಿರುವ ಕಚ್ಚಾ ವಸ್ತುಗಳ ಆಮದಿನಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಇದನ್ನು ಮನಗಂಡ ಕೃಷಿ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ಬೃಹತ್ ಪ್ರಮಾಣದ ದಾಸ್ತಾನು ವ್ಯವಸ್ಥೆ ಮಾಡಿದೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ಒಟ್ಟು 30.05 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಹಂಚಿಕೆ ಮಾಡಿದೆ. ಏಪ್ರಿಲ್ 1ರ ವೇಳೆಗೆ 11.42 ಲಕ್ಷ ಮೆಟ್ರಿಕ್ ಟನ್ ಸಂಗ್ರಹ ಲಭ್ಯವಿದೆ.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ (KSCMF) ಮತ್ತು ಬೀಜ ನಿಗಮದ (KSSC) ಮೂಲಕ ಕಾಪು ದಾಸ್ತಾನನ್ನು ಬಲಪಡಿಸಲಾಗಿದೆ. ಪ್ರಸ್ತುತ 28,224 ಮೆಟ್ರಿಕ್ ಟನ್ ಗೊಬ್ಬರ ಲಭ್ಯವಿದ್ದು, ಯೂರಿಯಾ ಮತ್ತು ಡಿ.ಎ.ಪಿ ಗೊಬ್ಬರಗಳ ಒಟ್ಟು ಅಗತ್ಯದ 25% ರಷ್ಟನ್ನು ಕಡ್ಡಾಯವಾಗಿ ಸಂಗ್ರಹಿಸಲು ನಿರ್ದೇಶನ ನೀಡಲಾಗಿದೆ. ಕಳೆದ ಮೂರು ವರ್ಷಗಳ ಸರಾಸರಿ ಬಳಕೆಯನ್ನು ಆಧರಿಸಿ ಜಿಲ್ಲಾವಾರು ಹಂಚಿಕೆಯನ್ನು ಮರು ನಿರ್ಧಾರ ಮಾಡಲಾಗಿದ್ದು, ಹೋಬಳಿ ಮಟ್ಟದಲ್ಲಿ ಪೂರೈಕೆ ಸಮಾತೋಲನ ಕಾಯ್ದುಕೊಳ್ಳಲು ಸೂಕ್ಷ್ಮ ಯೋಜನೆ ರೂಪಿಸಲಾಗಿದೆ. ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ತರಲು ಕೃಷಿ ಇಲಾಖೆಯು FRUITS ಡೇಟಾ ಬೇಸ್ ಆಧಾರಿತ 'Urea Distribution App' ಅಭಿವೃದ್ಧಿಪಡಿಸಿದೆ. ಇದು ರೈತರ ಭೂ ಹಿಡುವಳಿ ಮತ್ತು ಬೆಳೆ ಮಾದರಿಯನ್ನು ಆಧಾರಿಸಿ ಯುರಿಯಾ ಮಾರಾಟವನ್ನು ನಿಯಂತ್ರಿಸಲಾಗುತ್ತಿದೆ. ಈ ಆಪ್ಲಿಕೇಷನ್ ಈಗಾಗಲೇ ಎಂಟು ಜಿಲ್ಲೆಗಳಲ್ಲಿ ಪ್ರಯೋಗಿಕವಾಗಿ ಜಾರಿಯಲ್ಲಿದ್ದು, ಮುಂದಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ್ಯಾಂತ ವಿಸ್ತಾರಗೊಳ್ಳಲಿದೆ.