image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕೇಂದ್ರ ಸಚಿವರು ಮನವಿ ಮಾಡಿದ್ರೂ ಕೇಳದ ಭದ್ರತಾ ಸಿಬ್ಬಂದಿ : ವೇದಿಕೆಯ ಕೊನೆಯಲ್ಲಿ ಸಿದ್ದಲಿಂಗಸ್ವಾಮೀಜಿಗೆ ಸೀಟು

ಕೇಂದ್ರ ಸಚಿವರು ಮನವಿ ಮಾಡಿದ್ರೂ ಕೇಳದ ಭದ್ರತಾ ಸಿಬ್ಬಂದಿ : ವೇದಿಕೆಯ ಕೊನೆಯಲ್ಲಿ ಸಿದ್ದಲಿಂಗಸ್ವಾಮೀಜಿಗೆ ಸೀಟು

ತುಮಕೂರು : ತುಮಕೂರಿನ ಸಿದ್ದಗಂಗಾ ಮಠದಲ್ಲಿ ಆಯೋಜಿಸಲಾಗಿರುವ ಡಾ.ಶಿವಕುಮಾರ ಮಹಾಸ್ವಾಮಿಗಳ 119ನೇ ಜಯಂತೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಆಸನ ವ್ಯವಸ್ಥೆಯ ಶಿಷ್ಟಾಚಾರ ದೊಡ್ಡ ಮಟ್ಟದ ಗೊಂದಲಕ್ಕೆ ಕಾರಣವಾಯಿತು. ರಾಷ್ಟ್ರಪತಿಗಳ ಭದ್ರತಾ ಸಿಬ್ಬಂದಿ ಹಾಗೂ ಕೇಂದ್ರ ಸಚಿವರ ನಡುವೆ ಆಸನದ ವಿಚಾರವಾಗಿ ಗೊಂದಲ ಉಂಟುಮಾಡಿತು. ರಾಷ್ಟ್ರಪತಿಗಳು ಭಾಗವಹಿಸುವ ಕಾರ್ಯಕ್ರಮವಾದ್ದರಿಂದ ಶಿಷ್ಟಾಚಾರದ ಪ್ರಕಾರವೇ ಕುಳಿತುಕೊಳ್ಳುವಂತೆ ಭದ್ರತಾ ಸಿಬ್ಬಂದಿ ಸೂಚಿಸಿದರು. ಅದರ ಪ್ರಕಾರ ವೇದಿಕೆಯ ಕೊನೆಯಲ್ಲಿ ಸಿದ್ದಲಿಂಗಸ್ವಾಮೀಜಿ ಕುಳಿತುಕೊಳ್ಳುವಂತೆ ಹೇಳಲಾಯಿತು. ಆದರೆ ಶ್ರೀಗಳು ವೇದಿಕೆಯ ಕೊನೆಯಲ್ಲಿ ಕೂರುವುದು ಸರಿಯಲ್ಲ ರಾಷ್ಟ್ರಪತಿಗಳ ಪಕ್ಕದಲ್ಲಿ ಸಿದ್ದಲಿಂಗಸ್ವಾಮೀಜಿ ಅವರು ಕುಳಿತುಕೊಳ್ಳಲು ಅವಕಾಶ ಕಲ್ಪಿಸುವಂತೆ ಕೇಂದ್ರ ಸಚಿವ ವಿ ಸೋಮಣ್ಣ ಹಾಗೂ ಪ್ರಹ್ಲಾದ್ ಜೋಶಿ ಅವರು ಭದ್ರತಾ ಸಿಬ್ಬಂದಿಗೆ ಮನವಿ ಮಾಡಿದರು. ಆದರೆ ಭದ್ರತಾ ಸಿಬ್ಬಂದಿ ಇದ್ಯಾವುದಕ್ಕೂ ಕಿವಿಗೊಡಲಿಲ್ಲ. ಎಷ್ಟೇ ಹೇಳಿದರೂ ಕೇಂದ್ರ ಸಚಿವರ ಮನವಿಗೂ ರಾಷ್ಟ್ರಪತಿಗಳ ಭದ್ರತಾ ಸಿಬ್ಬಂದಿ ಒಪ್ಪಲಿಲ್ಲ. ಬದಲಾಗಿ ರಾಷ್ಟ್ರಪತಿಗಳ ಪಕ್ಕದಲ್ಲಿ ರಾಜ್ಯಪಾಲರು ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರಿಗೆ ಅವಕಾಶ ನೀಡಿದರು. ನಂತರ ಗೃಹಸಚಿವ ಪರಮೇಶ್ವರ್, ಲಕ್ಷ್ಮೀ ಹೆಬ್ಬಾಳ್ಕರ್, ಎಂಬಿ ಪಾಟೀಲ್ ಅವರಿಗೆ ಅವಕಾಶ ಮಾಡಿಕೊಡಲಾಯಿತು. ಮಠದ ಆತಿಥೇಯರಾದ ಸಿದ್ದಲಿಂಗ ಶ್ರೀಗಳು ಅನಿವಾರ್ಯವಾಗಿ ವೇದಿಕೆಯ ಕೊನೆಯಲ್ಲಿ ಕುಳಿತುಕೊಳ್ಳಬೇಕಾಯಿತು. ಈ ವೇಳೆ ಸ್ವಾಮೀಜಿ ವೇದಿಕೆಯ ಕೊನೆಯಲ್ಲಿ ಕುಳಿತಿರುವುದು ಕೇಂದ್ರ ಸಚಿವರಿಗೆ ಇರಿಸುಮುರಿಸು ಉಂಟುಮಾಡಿತು. ಈ ಆಸನ ವ್ಯವಸ್ಥೆಯ ಗೊಂದಲದಿಂದಾಗಿ ಸುಮಾರು 10 ನಿಮಿಷಗಳ ಕಾಲ ವೇದಿಕೆಗೆ ರಾಷ್ಟ್ರಪತಿ ಬರಲು ವಿಳಂಬವಾಯಿತು. ಶಿಷ್ಟಾಚಾರದ ಗೊಂದಲ ಸಂಪೂರ್ಣವಾಗಿ ಬಗೆಹರಿದು, ಎಲ್ಲರೂ ಆಸನಗಳಲ್ಲಿ ಕುಳಿತ ನಂತರವಷ್ಟೇ ರಾಷ್ಟ್ರಪತಿಗಳು ವೇದಿಕೆಗೆ ಆಗಮಿಸಿದರು.

Category
ಕರಾವಳಿ ತರಂಗಿಣಿ