ಕಲಬುರಗಿ : ಎಸ್‌ಎಸ್‌ಎಲ್ ಸಿ ಪರೀಕ್ಷೆ ನಡೆಯುತ್ತಿರುವ ಸಮಯದಲ್ಲೇ ಹಿಂದಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಅಂಕ ಬದಲು ಗ್ರೇಡ್ ನೀಡುವ ರಾಜ್ಯ ಸರ್ಕಾರದ ನಿರ್ಧಾರ ಅತ್ಯಂತ ಕೆಟ್ಟದ್ದಾಗಿದೆ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು. ರಾಜಕೀಯ ರಂಗ ಸೇರಿ ಇತರ ಕ್ಷೇತ್ರದಲ್ಲಿ ಆಟ ಆಡಿ, ಆದರೆ ಶಿಕ್ಷಣದಲ್ಲಿ ಆಟ ಬೇಡ. ವರ್ಷಪೂರ್ತಿ ಹಿಂದಿ ಬಾಷೆ ಕಲಿಸಿ, ಈಗ ಪರೀಕ್ಷೆ ಬರೆಯುವಾಗ ಹಾಗೆ ಸುಮ್ಮನೇ ಪರೀಕ್ಷೆ ಬರೆಯಿರಿ ಅಂದರೆ ಏನರ್ಥ. ಮಕ್ಕಳು ಕಷ್ಟಪಟ್ಟು ಹಿಂದಿ ಓದಿದ್ದಾರೆ. ಅವರ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲವೇ? ಒಂದು ವೇಳೆ ಇಂತಹ ನಿರ್ಧಾರ ಶೈಕ್ಷಣಿಕ ವರ್ಷಾರಂಭದಲ್ಲೇ ತೆಗೆದುಕೊಳ್ಳಬೇಕು. ಬೇಕಿದ್ದರೆ ಮುಂದಿನ ಶೈಕ್ಷಣಿಕ ಅವಧಿಗೆ ನಿರ್ಧಾರ ತೆಗೆದುಕೊಳ್ಳಲಿ, ಮನಸ್ಸಿಗೆ ಬಂದಂತೆ ನಡೆದುಕೊಂಡರೆ ಹೇಗೆಣ ಯಾರಾದರೂ ಪಾಲಕರು ಮಕ್ಕಳಿಗೆ ಹಿಂದಿ ಬೇಡ ಎಂದಿದ್ದಾರೆ. ಜವಾಹರಲಾಲ ನೆಹರು, ಇಂಧದಿರಾಗಾಂಧಿ, ರಾಜೀವಗಾಂಧಿ ಹಿಂದಿ ಅಲ್ವಾ, ಒಟ್ಟಾರೆ ರಾಜ್ಯ ಸರ್ಕಾರ ಎತ್ತ ಸಾಗುತ್ತಿದೆ ಎಂಬುದು ಈ ನಿರ್ಧಾರ ಖಚಿತಪಡಿಸುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವಾಗ್ದಾಳಿ ನಡೆಸಿದರು.
ಶಿಕ್ಷಣ ಮೊದಲ ಆದ್ಯತೆ ನೀಡಬೇಕು. ಡಾ. ಬಿ.ಆರ್. ಅಂಬೇಡ್ಕರ ಅವರು ಶಿಕ್ಷಣವೇ ಎಲ್ಲ ಸಂಪತ್ತಿಕ್ಕಿಂತ ದೊಡ್ಡದು ಎಂದಿದ್ದಾರೆ. ತದನಂತರ ಆರೋಗ್ಯಕ್ಕೆ ಮಹತ್ವ ನೀಡಬೇಕು. ಆದರೆ ರಾಜ್ಯ ಸರ್ಕಾರ ಈ ಎರಡು ಕ್ಷೇತ್ರಗಳನ್ನು ಕಡೆಗಣಿಸಿದೆ. ದೇಶದಲ್ಲಿ ಶಿಕ್ಷಣಕ್ಕೆ ಶೇ. 14ರಷ್ಟು ಖರ್ಚು ಮಾಡಲಾಗುತ್ತಿದ್ದರೆ ರಾಜ್ಯದಲ್ಲಿ ಶೇ. 10ರಷ್ಟು ಹಾಗೂ ಆರೋಗ್ಯಕ್ಕೆ ದೇಶದಲ್ಲಿ ಶೇ. 6.5 ರಷ್ಟು ಖರ್ಚು ಮಾಡಲಾಗುತ್ತಿದ್ದರೆ ರಾಜ್ಯದಲ್ಲಿ ಶೇ. 3.5ರಷ್ಟು ಮಾತ್ರ ಖರ್ಚು ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಆದ್ಯತೆ ಅಬಕಾರಿ ಆದಾಯ ಹೆಚ್ಚಿಸುವುದು, ದಲಿತರ ಒಗ್ಗಟ್ಟು ಮುರಿಯುವುದು, ಮೀಸಲು ಹಣ ವರ್ಗಾಯಿಸುವುದು ಆಗಿದೆ. ಆದ್ದರಿಂದ ಹಿಂದಿ ಭಾಷೆಗೆ ಅಂಕುಶ ಹಾಕುವ ರಾಜ್ಯ ಸರ್ಕಾರ ತನ್ನ ನಿರ್ಧಾರ ವಾಪಸ್ಸು ಪಡೆಯಬೇಕು. ಇಲ್ಲದಿದ್ದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಒಳ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ, ಅದರಲ್ಲೂ ದಲಿತರ ಒಗ್ಗಟ್ಟನ್ನು ಮುರಿದಿರುವ ಹಿನ್ನೆಲೆಯಲ್ಲಿ ಜತೆಗೆ ಎಸ್ ಟಿ ಟಿಎಸ್ ಪಿ ಅನುದಾನ ಗ್ಯಾರಂಟಿಗೆ ಬಳಕೆಯಿಂದ ದಲಿತರು ಸರ್ಕಾರದ ಮೇಲೆ ಮುನಿಸಿಕೊಂಡಿದ್ದು, ಜತೆಗೆ ದಾವಣಗೆರೆಯಲ್ಲಿ ಶೇ. 70ರಷ್ಟು ಮುಸ್ಲಿಂರಿದ್ದರೂ ಟಿಕೆಟ್ ನೀಡದೇ ಶ್ರೀಮಂತರಿಗೆ ಟಿಕೆಟ್ ನೀಡಿದ್ದರಿಂದ ಹಾಗೂ ಪೈಲ್ವಾನ್ ಅವರಿಗೆ ಪ್ಯಾಕೇಜ್ ನೀಡಿ ಬಾಯಿ ಮುಚ್ಚಿಸಿರುವ ನಡೆಯಿಂದ ಮುಸ್ಲಿಂರೂ ಕಾಂಗ್ರೆಸ್ ದಿಂದ ದೂರಾಗುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಬಾರಿ ದಾವಣಗೆರೆಯಲ್ಲಿ ಮುಸ್ಲಿಮರು ಬಿಜೆಪಿಗೆ ಮತ ಹಾಕುತ್ತಾರೆ.ಕೇಂದ್ರದಲ್ಲಿ ಮೋದಿ ಅಧಿಕಾರದಲ್ಲಿ 12 ವರ್ಷ ಇದ್ರು ಮೋಸ ಮಾಡಿಲ್ಲ. ಕಾಂಗ್ರೆಸ್ ನವರು ಮುಸ್ಲಿಮರಿಗೆ ಬಿಜೆಪಿ ಬಗ್ಗೆ ಹೆದರಿಸಿ ಮತ ಹಾಕಿಸಿಕೊಂಡರು. ಆದರೆ ಈಗ ಮುಸ್ಲಿಂ ಸಮುದಾಯದ ಜನರಿಗೆ ಅರಿವಾಗಿದೆ ಎಂದರು.