ವಿಧಾನಸಭೆ : ಅಭಿವೃದ್ಧಿ ವಿಚಾರದಲ್ಲಿ ಕೇಂದ್ರಕ್ಕಿಂತ ರಾಜ್ಯವೇ ಉತ್ತಮವಾಗಿದೆ. ಕೇಂದ್ರದ ವಿತ್ತೀಯ ಕೊರತೆ ಶೇ.4.3ರಷ್ಟಾಗಿದ್ದರೆ, ರಾಜ್ಯದ ವಿತ್ತೀಯ ಕೊರತೆ 2026-27ನೇ ಸಾಲಿನಲ್ಲೂ ಶೇ.2.95 ರಷ್ಟೇ ಇರಲಿದೆ. ಇನ್ನು ಕೇಂದ್ರದ ಬಜೆಟ್ ಗಾತ್ರ ಶೇ.5.6ರಷ್ಟು ಹೆಚ್ಚಾಗಿದ್ದರೆ, ರಾಜ್ಯದ ಬಜೆಟ್ ಗಾತ್ರ ಕಳೆದ ಸಾಲಿಗಿಂತ ಶೇ.9.4ರಷ್ಟು ಹೆಚ್ಚಾಗಿದೆ. ಕೇಂದ್ರದ ಜಿಡಿಪಿಗಿಂತ ಕರ್ನಾಟಕದ ಜಿಎಸ್‌ಡಿಪಿ ಚೆನ್ನಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಬಜೆಟ್ ಅಧಿವೇಶನ ಆರಂಭವಾದಾಗಿನಿಂದ ಇಲ್ಲಿಯವರೆಗೆ ವಿಧಾನಸಭೆಯಲ್ಲಿ ನಡೆದ ಬಜೆಟ್ ಮೇಲಿನ ಚರ್ಚೆ, ಪ್ರತಿಪಕ್ಷದವರ ಟೀಕೆ, ತಜ್ಞರ ವಿಮರ್ಶೆ ಹಾಗೂ ಸಾರ್ವಜನಿಕ ಅಭಿಪ್ರಾಯಗಳಿಗೆ ಬುಧವಾರ ಅವರು ಸುದೀರ್ಘ ಉತ್ತರ ನೀಡಿ ತಮ್ಮ ಸರ್ಕಾರದ ಸಾಧನೆಯನ್ನು ಸಮರ್ಥಿಸಿಕೊಂಡರು. ಬಜೆಟ್ ಗಾತ್ರದ ಶೇಕಡಾವಾರು ಹೆಚ್ಚಳ, ಜಿಎಸ್‌ಡಿಪಿ ಬೆಳವಣಿಗೆ, ಆರ್ಥಿಕ ಶಿಸ್ತು ಪಾಲನೆ ಸೇರಿ ಬಹುತೇಕ ಎಲ್ಲ ವಿಚಾರಗಳಲ್ಲೂ ಕೇಂದ್ರಕ್ಕಿಂತ ರಾಜ್ಯದವೇ ಬೆಸ್ಟ್. ಹೀಗಿರುವಾಗ ಪ್ರತಿಪಕ್ಷದವರು ಟೀಕಿಸಿರುವಂತೆ ನಮ್ಮದು ಖಾಲಿ ಬೊಂಬಿನ ಬಜೆಟ್ ಆಗಲು ಸಾಧ್ಯವೇ ಇಲ್ಲ. ಇಡೀ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾದ 'ತುಂಬಿದ ಕೊಡದ' ಬಜೆಟ್ ನಮ್ಮದು ಎಂದು ತಿರುಗೇಟು ನೀಡಿದರು.
ಇದೆಲ್ಲದರ ಮಧ್ಯೆ ನಾವು ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಮಾನದಂಡಗಳಲ್ಲಿ ಎರಡನ್ನು ಪೂರೈಸಿದ್ದೇವೆ. ಮಾನದಂಡಗಳ ಪ್ರಕಾರ ವಿತ್ತೀಯ ಕೊರತೆ ಜಿಎಸ್‌ಡಿಪಿಯ ಶೇ.3 ಒಳಗಿರಬೇಕು. ನಮ್ಮ ರಾಜ್ಯದ ವಿತ್ತೀಯ ಕೊರತೆ 2026-27ನೇ ಸಾಲಿನಲ್ಲೂ ಶೇ.2.95 ರಷ್ಟೇ ಇರಲಿದೆ. ಅದೇ ರೀತಿ ಒಟ್ಟು ಸಾಲದ ಪ್ರಮಾಣ ಕೂಡ ಜಿಎಸ್‌ಡಿಪಿಯ ಶೇ.25ರ ಒಳಗಿರಬೇಕು. ಆ ಪ್ರಕಾರ ಈಗಿನ ಸಾಲದ ಪ್ರಮಾಣವೂ ಶೇ.24.94 ರಷ್ಟಿದೆ. 1994-95ರಲ್ಲಿ ಹಣಕಾಸು ಸಚಿವನಾದಾಗಿನಿಂದ ಈವರೆಗೆ ಮಂಡಿಸಿರುವ 17 ಬಜೆಟ್‌ನಲ್ಲೂ ಸಾಧ್ಯವಾದಷ್ಟು ಮಟ್ಟಿಗೆ ವಿತ್ತೀಯ ಕೊರತೆ ಮಾನದಂಡದ ಒಳಗೇ ಇರುವಂತೆ ನೋಡಿಕೊಂಡಿದ್ದೇನೆ. ಆದರೆ, ಈ ಬಾರಿಯೂ ಸೇರಿ ಕಳೆದ ನಾಲ್ಕು ಬಜೆಟ್‌ನಲ್ಲಿ ರಾಜಸ್ವ ಉಳಿತಾಯ ಮಾಡಲು ಆಗಿಲ್ಲ. ಇದಕ್ಕೆ ಕಾರಣ ನಮ್ಮ ಸರ್ಕಾರವಲ್ಲ. ಹಿಂದಿನ ಸರ್ಕಾರಗಳಲ್ಲಿ ಆರ್ಥಿಕ ಶಿಸ್ತು ಪಾಲಿಸದಿರುವುದು, ಅನುದಾನ ಇಲ್ಲದಿದ್ದರೂ ಲಕ್ಷಾಂತರ ಕೋಟಿ ರು. ಯೋಜನೆಗಳಿಗೆ ಅನುಮೋದನೆ ನೀಡಿರುವುದು. ಆ ಯೋಜನೆಗಳಿಗೆ ನಾವು ಈಗ ಹಣ ನೀಡುತ್ತಿದ್ದೇವೆ ಎಂದು ಆರೋಪಿಸಿದರು. ಆದರೆ, ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ವಿತ್ತೀಯ ಕೊರತೆ 16,91,769 ಕೋಟಿ ರು.ಗಳಾಗಿದೆ. 16ನೇ ಹಣಕಾಸು ಆಯೋಗದ ಮಾರ್ಗಸೂಚಿ ಪ್ರಕಾರ ದೇಶದ ವಿತ್ತೀಯ ಕೊರತೆ ದೇಶದ ಜಿಡಿಪಿಯ ಶೇ.3 ಮೀರಬಾರದು. ಆದರೆ, ಇದು ಶೇ.4.3ರಷ್ಟಾಗಿದೆ. ಅದೇ ರೀತಿ ಸಾಲದ ಪ್ರಮಾಣ ದೇಶದ ಜಿಡಿಪಿಯ ಶೇ.25ರೊಳಗಿರಬೇಕು. ಸ್ವಾತಂತ್ರ್ಯ ಬಂದಾಗಿನಿಂದ 2014ರ ವರೆಗೆ ದೇಶದ ಸಾಲ ಸುಮಾರು 53 ಲಕ್ಷ ಕೋಟಿ ರು.ಗಳಷ್ಟಿತ್ತು. ಆದರೆ, ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲೇ ಇದು 200 ಲಕ್ಷ ಕೋಟಿ ರು. ದಾಟಿದೆ. ಇವರ 11 ವರ್ಷಗಳ ಆಡಳಿತದಲ್ಲೇ 165 ಕೋಟಿ ರು.ನಷ್ಟು ಸಾಲ ಮಾಡಿದ್ದಾರೆ ಎಂದರು.