ಚಿಕ್ಕಮಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ 'ಭೂ ಗ್ಯಾರಂಟಿ' ಯೋಜನೆಯಡಿ ರಾಜ್ಯಾದ್ಯಂತ ಕಂದಾಯ ಗ್ರಾಮ ಹಾಗೂ ಉಪ ಕಂದಾಯ ಗ್ರಾಮಗಳಲ್ಲಿ ವಾಸವಾಗಿರುವ ಒಟ್ಟು 3,38,663 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯರಾದ ಡಾ. ರವಿ ಸಿ.ಟಿ. ಅವರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಸಚಿವರು ಲಿಖಿತ ಮೂಲಕ ಈ ಉತ್ತರ ನೀಡಿದ್ದಾರೆ.
ಕಾನೂನು ಅನ್ವಯ: ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94(ಡಿ), ಭೂ ಕಂದಾಯ ನಿಯಮಗಳು 1966 ಹಾಗೂ ಭೂ ಸುಧಾರಣಾ ನಿಯಮಗಳು 1974ರ ಅನ್ವಯ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಹೊಸದಾಗಿ ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ ಹಕ್ಕು ಪತ್ರ ನೀಡಲಾಗುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಪ್ರಗತಿ: ಜಿಲ್ಲೆಯಲ್ಲಿ 440 ದಾಖಲೆ ರಹಿತ ಹಾಗೂ 213 ಕಂದಾಯ ಗ್ರಾಮಗಳ 9,676 ಫಲಾನುಭವಿಗಳಿಗೆ ಈಗಾಗಲೇ ಹಕ್ಕು ಪತ್ರ ವಿತರಿಸಲಾಗಿದೆ. ಜಿಲ್ಲೆಯ ಒಟ್ಟು 1,140 ಕಂದಾಯ ಗ್ರಾಮಗಳಲ್ಲಿ 11,37,944 ಜನರು ವಾಸಿಸುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪರಿಹಾರ 2.0 ತಂತ್ರಾಂಶ: ನೈಸರ್ಗಿಕ ವಿಕೋಪಗಳಿಂದ ತೊಂದರೆಗೊಳಗಾದವರಿಗೆ ತ್ವರಿತ ಮತ್ತು ಪಾರದರ್ಶಕವಾಗಿ ಪರಿಹಾರ ನೀಡಲು ಸರ್ಕಾರ 'ಪರಿಹಾರ 2.0' ತಂತ್ರಾಂಶವನ್ನು ಮೇಲ್ದರ್ಜೆಗೇರಿಸಿದೆ.
ಈ ಹೊಸ ವ್ಯವಸ್ಥೆಯಲ್ಲಿ ಉಪಗ್ರಹ ಆಧಾರಿತ ಬೆಳೆ ಹಾನಿ ದತ್ತಾಂಶ, ಆಧಾರ್ ಜೋಡಿತ ಭೂ ದಾಖಲೆಗಳು ಮತ್ತು ಬೆಳೆ ಮಾಹಿತಿಗಳನ್ನು ಸಂಯೋಜಿಸಲಾಗುತ್ತದೆ. ಇದರಿಂದ ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಸಂತ್ರಸ್ತರ ಬ್ಯಾಂಕ್ ಖಾತೆಗೆ ಪರಿಹಾರದ ಹಣ ಜಮೆಯಾಗಲಿದೆ ಎಂದು ಸಚಿವರು ವಿವರಿಸಿದ್ದಾರೆ.