ಬೆಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಜ್ ಯಾತ್ರೆಗೆ ತೆರಳುವ ಯಾತ್ರಿಕರಿಗೆ ಪ್ರಸಕ್ತ ವರ್ಷ ಪ್ರತ್ಯೇಕ ಟರ್ಮಿನಲ್ ಸೌಲಭ್ಯವನ್ನು ಮರುಸ್ಥಾಪಿಸುವ ಕುರಿತು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಈ ಕುರಿತು ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಮಾಹಿತಿ ನೀಡಿದ ಹಜ್ ಸಚಿವ ರಹೀಂ ಖಾನ್ ಅವರು, ಕಳೆದ ಎರಡು ವರ್ಷಗಳಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹಜ್ ಯಾತ್ರಿಕರಿಗಾಗಿ ಪ್ರತ್ಯೇಕ ಟರ್ಮಿನಲ್ ವ್ಯವಸ್ಥೆಯನ್ನು ಕಲ್ಪಿಸಲು ಕೇಂದ್ರ ಸರ್ಕಾರವು ಅನುಮತಿ ನೀಡಿರಲಿಲ್ಲ ಎಂದು ತಿಳಿಸಿದರು.
ಆದರೆ ಈ ವರ್ಷ ಯಾತ್ರಿಕರ ಅನುಕೂಲಕ್ಕಾಗಿ ಈ ವ್ಯವಸ್ಥೆಯನ್ನು ಪುನರಾರಂಭಿಸಲು ಕೇಂದ್ರ ಸಚಿವರನ್ನು ಭೇಟಿ ಮಾಡಿ ವಿಶೇಷ ಮನವಿ ಸಲ್ಲಿಸಲಾಗಿದ್ದು, ಈ ಬಾರಿ ಅನುಮತಿ ಸಿಗುವ ವಿಶ್ವಾಸವಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ. 2026ನೇ ಸಾಲಿನ ಹಜ್ ಯಾತ್ರೆಗೆ ತೆರಳುವ ಯಾತ್ರಿಕರಿಗಾಗಿ ವೈದ್ಯಕೀಯ ತಪಾಸಣೆ ಮತ್ತು ಲಸಿಕಾ ಕಾರ್ಯಕ್ರಮಗಳನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದ್ದು, ಮಂಗಳೂರಿನ ಜಪ್ಪಿನಮೊಗರಿನ ಯೆನೆಪೋಯ ಶಾಲೆಯಲ್ಲಿ ಮಾರ್ಚ್ 28ರಂದು ವಿಶೇಷ ಲಸಿಕಾ ಶಿಬಿರ ನಡೆಯಲಿದೆ.