ಬೆಂಗಳೂರು : ಶಾಲೆಗಳನ್ನು ಮೂರು ವರ್ಗಗಳಾಗಿ ವಿಂಗಡಿಸಿ, ತುರ್ತು ಸೇವಾ ಗುಂಪು ಎಂದು ಪರಿಗಣಿಸಿ ಶಿಕ್ಷಕರ ವರ್ಗಾವಣೆ ಸ್ವರೂಪದಲ್ಲಿ ಆಮೂಲಾಗ್ರ ಬದಲಾವಣೆಗೆ ಅವಕಾಶ ಕಲ್ಪಿಸುವ 'ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಮಸೂದೆಗೆ ವಿಧಾನಸಭೆ ಅನುಮೋದನೆ ನೀಡಲಾಯಿತು. ಮಸೂದೆಯು ಶಿಕ್ಷಕರನ್ನು ಬೋಧಕೇತರ ಹುದ್ದೆಗಳಿಗೆ ವರ್ಗಾವಣೆ ಮಾಡುವುದನ್ನು ನಿಷೇಧಿಸುತ್ತದೆ. ಶಿಕ್ಷಕರ ಕೊರತೆಯನ್ನು ನೀಗಿಸುವುದು ಇದರ ಉದ್ದೇಶವಾಗಿದೆ. ಗರ್ಭಿಣಿಯರು ಮತ್ತು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಹೊಂದಿರುವ ಮಹಿಳೆಯರು ತಮಗೆ ಬೇಕಾಗುವ ಯಾವುದೇ ಸ್ಥಳಕ್ಕೆ ವರ್ಗಾವಣೆಗೆ ಅರ್ಹರಾಗಿರುತ್ತಾರೆ. ಮಹಿಳಾ ಶಿಕ್ಷಕರು ತಮ್ಮ ಮಕ್ಕಳ ಲಾಲನೆ ಪಾಲನೆ ನೋಡಿಕೊಳ್ಳಲು ಅನುವು ಮಾಡಿಕೊಡುವುದು ಇದರ ಉದ್ದೇಶವಾಗಿದೆ. ಮಗು ಪಾಲನೆಗಾಗಿ ತವರು ಅಥವಾ ಗಂಡನ ಊರಲ್ಲೇ ಟೀಚರ್ ಆಗಬಹುದು. ಹೆರಿಗೆಯಾದ 5 ವರ್ಷದ ತನಕ ಶಿಕ್ಷಕಿ ಇಚ್ಛಿಸಿದೆಡೆಗೆ ವರ್ಗಾವಣೆ, 2 ಮಕ್ಕಳಿಗಷ್ಟೇ ಸೇವೆ ಸೀಮಿತ ಎಂದು ಹೇಳಿದ್ದಾರೆ.
50,000 ಖಾಲಿ ಹುದ್ದೆಗಳಿಗೆ ಬದಲಾಗಿ 15,000 ಶಿಕ್ಷಕರನ್ನು ನೇಮಿಸಿಕೊಳ್ಳಲು ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಪರಿಶಿಷ್ಟ ಜಾತಿಗಳ (SC) ಆಂತರಿಕ ಮೀಸಲಾತಿಯ ಸಮಸ್ಯೆ ಬಗೆಹರಿದ ನಂತರ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ ಎಂದು ಅವರು ಹೇಳಿದರು, ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 5,800 ಹುದ್ದೆಗಳನ್ನು ನೀಡಲಾಗುತ್ತದೆ. ಶಾಲೆಗಳು, ಪದವಿಪೂರ್ವ ಕಾಲೇಜುಗಳಲ್ಲಿ ಕನಿಷ್ಠ ಸೇವಾ ಅವಧಿ ಪೂರ್ಣಗೊಳಿಸಿದ ಶಿಕ್ಷಕರು ಅಥವಾ ಉಪನ್ಯಾಸಕರಿಗೆ ಮೊದಲ ವರ್ಗದ ಹುದ್ದೆಗಳ ಲಭ್ಯತೆ ಆಧಾರದಲ್ಲಿ ವರ್ಗಾವಣೆ ಕೋರಲು ಅವಕಾಶ ಕಲ್ಪಿಸಲಾಗಿದೆ.