ಬೆಂಗಳೂರು : ರಾಜ್ಯದ ಹೋಟೆಲ್‌ಗಳಿಗೆ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆಯಲ್ಲಿ ಆಗುತ್ತಿರುವ ತಾರತಮ್ಯ ಮತ್ತು ಕೊರತೆಯನ್ನು ನೀಗಿಸಬೇಕು ಎಂದು ಕೋರಿ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಅಂತಾರಾಷ್ಟ್ರೀಯ ಮಟ್ಟದ ಯುದ್ಧದ ಪರಿಸ್ಥಿತಿ ಮತ್ತು ಆಮದು-ರಫ್ತಿನ ವ್ಯತ್ಯಯಗಳ ಹಿನ್ನೆಲೆಯಲ್ಲಿ ಇಂತಹ ವಿಚಾರಗಳಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಪರ ವಕೀಲ ಕೆ. ಸತೀಶ್ ಭಟ್ ಅವರು ನ್ಯಾಯಾಲಯದಲ್ಲಿ ಪ್ರಬಲ ವಾದ ಮಂಡಿಸಿದರು. 'ನೆರೆಯ ತಮಿಳುನಾಡಿನಲ್ಲಿ ದಿನಕ್ಕೆ 8,500 ಮತ್ತು ಕೇರಳದಲ್ಲಿ 4,200 ವಾಣಿಜ್ಯ ಸಿಲಿಂಡರ್‌ಗಳನ್ನು ನೀಡಲಾಗುತ್ತಿದೆ. ಆದರೆ ಕರ್ನಾಟಕದ ಹೋಟೆಲ್‌ಗಳಿಗೆ ಕೇವಲ 1,000 ಸಿಲಿಂಡರ್‌ಗಳನ್ನು ಮಾತ್ರ ನೀಡಲಾಗುತ್ತಿದೆ. ಸರ್ಕಾರವು ಸಿಲಿಂಡರ್ ವಿತರಣೆಯ ಮಾರ್ಗಸೂಚಿಗಳನ್ನು ಸಮರ್ಪಕವಾಗಿ ಪಾಲಿಸುತ್ತಿಲ್ಲ. ಇದರಿಂದ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ' ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಈ ಸಮಸ್ಯೆಯ ಬಗ್ಗೆ ಇಂದು ರಾಜ್ಯ ಸರ್ಕಾರದ ಸಚಿವರೊಂದಿಗೂ ಮಾತುಕತೆ ನಡೆಸುವುದಾಗಿ ಅವರು ತಿಳಿಸಿದರು.