image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಯುದ್ಧಗಳು ನಿಲ್ಲಲಿ, ಸರ್ಕಾರ ಉರುಳಿಸುವ ದುರಾಲೋಚನೆ ಬಾರದಿರಲಿ': ಹಂಪನಾ

ಯುದ್ಧಗಳು ನಿಲ್ಲಲಿ, ಸರ್ಕಾರ ಉರುಳಿಸುವ ದುರಾಲೋಚನೆ ಬಾರದಿರಲಿ': ಹಂಪನಾ

ಮೈಸೂರು: ''ಇಸ್ರೇಲ್-ಪ್ಯಾಲೆಸ್ತೀನ್, ರಷ್ಯಾ-ಉಕ್ರೇನ್ ಯುದ್ಧ ನಿಂತು, ನಿತ್ಯ ನಡೆಯುತ್ತಿರುವ ಅಮಾಯಕರ ಮಾರಣಹೋಮ ನಿಲ್ಲಲು ಆ ರಾಷ್ಟ್ರನಾಯಕರು ಕೂಡಲೆ ಜೀವಪರ ಕಾಳಜಿ ತೋರುವಂತೆ ಅವರಿಗೆ ಪ್ರೇರಣೆ ನೀಡಬೇಕು ಎಂದು ನಾಡದೇವತೆ ಚಾಮುಂಡೇಶ್ವರಿಯಲ್ಲಿ ಬೇಡುತ್ತೇನೆ'' ಎಂದು ದಸರಾ ಉದ್ಘಾಟಕರಾದ ನಾಡೋಜ ಹಂಪ ನಾಗರಾಜಯ್ಯ ತಿಳಿಸಿದರು.

ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ, ನಾಡಹಬ್ಬ ದಸರಾಗೆ ಚಾಲನೆ ನೀಡಿದ ಬಳಿಕ ಅವರು ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ''ಲೋಕಮಾತೆ ಚಾಮುಂಡೇಶ್ವರಿದೇವಿಗೆ ಮೊದಲು ನಮಸ್ಕರಿಸಿ, ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರನ್ನು ನೆನೆದು ನನ್ನ ಮಾತುಗಳನ್ನು ಆರಂಭಿಸುತ್ತೇನೆ. ಅಭೀಷ್ಟವರಪ್ರದಾಯಿನಿ ಎಂದು ಭಕ್ತರು ಆರಾಧಿಸುವ ದೇವಿ ಚಾಮುಂಡಾಂಬಿಕೆಗೆ ಪೊಡಮಟ್ಟು ಮೂರು ಬೇಡಿಕೆಗಳನ್ನು ಈಡೇರಿಸಿಕೊಡಬೇಕೆಂದು ದೇವಿಯಲ್ಲಿ ಪ್ರಾರ್ಥಿಸುತ್ತೇನೆ'' ಎಂದರು.

ಬಹುದೊಡ್ಡ ರಾಷ್ಟ್ರೀಯ ಸಮಸ್ಯೆಯೆಂದರೆ ನಿರುದ್ಯೋಗ ಸಮಸ್ಯೆ, ಯುವಜನರು ಇದರಿಂದ ಹತಾಶರಾಗಿದ್ದಾರೆ. ನಿರುದ್ಯೋಗ ನಿವಾರಣೆಗೆ ಆದ್ಯತೆಯಿತ್ತು ಕೇಂದ್ರ ಸರ್ಕಾರವು ಕ್ರಮ ಕೈಗೊಳ್ಳುವಂತೆ ಪ್ರೇರೇಪಿಸಬೇಕು ಎಂದು ಯುವಜನತೆಯ ಪರವಾಗಿ ದೇವಿಯನ್ನು ಪ್ರಾರ್ಥಿಸುತ್ತೇನೆ. ಕನ್ನಡ ನಾಡು, ನುಡಿ, ನೆಲ, ಜಲ, ಕಲೆ, ಸಂಸ್ಕೃತಿ ಸಂರಕ್ಷಣೆಗಾಗಿ ಹೋರಾಡುವವವರನ್ನು ಕೊಲೆಗಾರರಂತೆ ಕಾಣದೆ, ಪ್ರೀತಿ ಅಭಿಮಾನಗಳಿಂದ ಕಾಣುವಂತೆ ಆಡಳಿತಾಂಗಕ್ಕೆ ಪ್ರೇರಣೆ ಕೊಡುವಂತೆ ವಿನಂತಿಸುತ್ತೇನೆ'' ಎಂದರು.

''ಸರ್ಕಾರಗಳನ್ನು ಉರುಳಿಸುವ ದುರಾಲೋಚನೆ ಬರದಂತೆ ತಡೆದು, ಚುನಾಯಿತ ಸರ್ಕಾರಗಳನ್ನು ಉಳಿಸುವ ಚಿಂತನೆಗಳನ್ನು ಲೋಕಾಂಬಿಕೆಯು ಮೂಡಿಸಲೆಂದು ಬೇಡುತ್ತೇನೆ. ಕೆಡವುವುದು ಸುಲಭ, ಕಟ್ಟುವುದು ಕಷ್ಟ, ಮೊದಲೇ ದೊಡ್ಡ ಹೊರೆಗಳಿಂದ ಬಳಲಿ ಬಸವಳಿದಿರುವ ಶ್ರೀಸಾಮಾನ್ಯರ ಹೆಗಲಿಗೆ ಮತ್ತೆ ಮತ್ತೆ ನಡೆಯುವ ಚುನಾವಣೆಗಳು ಇನ್ನಷ್ಟು ಭಾರ ಹೇರಿದರೆ ಕುಸಿಯುತ್ತಾನಷ್ಟೆ. ಯಾವ ಪಕ್ಷವೂ ಶಾಶ್ವತವಾಗಿ ಅಧಿಕಾರದಲ್ಲಿ ಇರುವುದು ಅಸಾಧ್ಯ. ಚಕ್ರಾರ ಪಂಕ್ತಿರಿವ ಗಚ್ಛತಿ ಭಾಗ್ಯ ಪಂಕ್ತಿ, ಸೋತ ಪಕ್ಷವು ಮತ್ತೆ ಅಧಿಕಾರಕ್ಕೆ ಬರಲು, ಜನಮನವನ್ನು ತಮ್ಮ ಪರವಾಗಿ ಒಲಿಸಿಕೊಳ್ಳಲು 5 ವರ್ಷದಲ್ಲಿ ಸಜ್ಜಾಗಬಹುದು'' ಎಂದು ತಿಳಿಸಿದರು.

Category
ಕರಾವಳಿ ತರಂಗಿಣಿ