ಬೆಂಗಳೂರು : ರಾಜ್ಯದ 2 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಅದರಲ್ಲೂ ದಾವಣಗೆರೆ ದಕ್ಷಿಣ ವಿಧಾನಸಭೆ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ದಾವಣಗೆರೆ ವಿಷಯದಲ್ಲಿ ಒಳ್ಳೆಯ ತೀರ್ಮಾನ ಆಗಬಹುದು ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅಭಿಪ್ರಾಯಪಟ್ಟಿದ್ದಾರೆ. ರಂಜಾನ್ ಸಾಮೂಹಿಕ ಪ್ರಾರ್ಥನೆ ವೇಳೆ ಸುದ್ದಿಗಾರರ ಜತೆ ಮಾತನಾಡಿ, ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಬಗ್ಗೆ ಕಾಂಗ್ರೆಸ್ ಪಕ್ಷ ಏನು ತೀರ್ಮಾನ ಮಾಡುತ್ತದೆಯೋ ನನಗೆ ಗೊತ್ತಿಲ್ಲ. ಮುಸಲ್ಮಾನ ನಾಯಕರು ಎಷ್ಟು ಶಕ್ತಿ ತೋರಿಸುತ್ತಾರೆ ನೋಡೋಣ. ಎಲ್ಲರೂ ಒಂದಾಗಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೇಳಿದ್ದಾರೆ. ಅದರ ಮೇಲೆ ಏನು ನಿರ್ಣಯ ಆಗುತ್ತೆ ನೋಡೋಣ. ಬಹುತೇಕ ಒಳ್ಳೆಯ ತೀರ್ಮಾನ ಆಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾಮಪತ್ರ ಸಲ್ಲಿಕೆಗೆ ಸೋಮವಾರವೇ ಕೊನೆ ದಿನವಾಗಿದೆ. ಹಾಗಾಗಿ ಭಾನುವಾರ ಸಮುದಾಯದವರೆಲ್ಲರೂ ಒಟ್ಟಾಗಿ ಸೇರಿ ಚರ್ಚಿಸುತ್ತೇವೆ. ಸಮುದಾಯದ ಹಲವು ಮುಖಂಡರು ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂದರು.