ಬೀದರ್ : ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನೀಲಕಂಠವಾಡಿ ಗ್ರಾಮದಲ್ಲಿ ಮದ್ಯದ ಹಾವಳಿ ಮಿತಿಮೀರಿದೆ. ಗ್ರಾಮಕ್ಕೆ ಭೇಟಿ ನೀಡಿದ್ದ ಬಸವಕಲ್ಯಾಣ ಶಾಸಕ ಶರಣು ಸಲಗರ್ ಅವರ ಮುಂದೆ ನೂರಾರು ಮಹಿಳೆಯರು ಕಣ್ಣೀರಿಡುತ್ತಾ, ಗ್ರಾಮದಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಆಗ್ರಹಿಸಿದ್ದಾರೆ. ಗ್ರಾಮದಲ್ಲಿ ಮದ್ಯಪಾನದ ಚಟಕ್ಕೆ ಬಿದ್ದು ಕಾಲೇಜು ಯುವಕರು ಸೇರಿದಂತೆ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. “ನಮ್ಮೂರಿನಲ್ಲಿ ಅನೇಕ ಮಹಿಳೆಯರು ಈಗಾಗಲೇ ವಿಧವೆಯರಾಗಿದ್ದಾರೆ, ಇನ್ನು ಮುಂದಾದರೂ ಯುವಕರ ಭವಿಷ್ಯ ಕಾಪಾಡಿ” ಎಂದು ಮಹಿಳೆಯರು ಶಾಸಕರ ಮುಂದೆ ಅತ್ತಿದ್ದಾರೆ. ಗ್ರಾಮದ ಕಿರಾಣಿ ಅಂಗಡಿಗಳಲ್ಲಿ ಹಾಗೂ ಹಾದಿಬೀದಿಗಳಲ್ಲಿ ಎಗ್ಗಿಲ್ಲದೆ ಮದ್ಯ ಮಾರಾಟ ಮಾಡಲಾಗುತ್ತಿದೆ. ದೂರು ನೀಡಿದರೂ ಪೊಲೀಸರು ಬಂದು ಸುಮ್ಮನೆ ನೋಡಿ ಹೋಗುತ್ತಾರೆಯೇ ಹೊರತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. “ನಿಮ್ಮ ಕಾಲಿಗೆ ಬೀಳ್ತೀವಿ, ಹೇಗಾದರೂ ಮಾಡಿ ನಮ್ಮೂರಲ್ಲಿ ಸಾರಾಯಿ ಬಂದ್ ಮಾಡಿಸಿ” ಎಂದು ಮಹಿಳೆಯರು ಶಾಸಕರ ಹತ್ತಿರ ಪಟ್ಟು ಹಿಡಿದಿದ್ದಾರೆ.