ಕೋಲಾರ : ಕೋಲಾರ ಜಿಲ್ಲೆಯ ಟೇಕಲ್‌ನಲ್ಲಿ ಲಂಚ ಪಡೆಯುತ್ತಿದ್ದ ಸಹಾಯಕ ಔಷಧ ನಿಯಂತ್ರಕಿ ಜೆ. ಶ್ಯಾಮಲಾ ಅವರನ್ನು ಲೋಕಾಯುಕ್ತ ಪೊಲೀಸರು ನಾಟಕೀಯವಾಗಿ ಬೆನ್ನಟ್ಟಿ ಬಂಧಿಸಿದ್ದಾರೆ. ಔಷಧ ಅಂಗಡಿಯೊಂದನ್ನು ಬೇರೆಡೆಗೆ ಸ್ಥಳಾಂತರಿಸಲು ಪರವಾನಗಿ ನೀಡುವ ಸಲುವಾಗಿ ಶ್ಯಾಮಲಾ ಅವರು 35 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಕುರಿತು ಟೇಕಲ್‌ನ ಅಂಗಡಿ ಮಾಲೀಕರು ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು.
ಮಂಗಳವಾರ ರಾತ್ರಿ ಟೇಕಲ್‌ನಲ್ಲಿ ಅಧಿಕಾರಿ ಶ್ಯಾಮಲಾ ಅವರು ತಮ್ಮ ಕಾರಿನಲ್ಲೇ ಕುಳಿತು ಲಂಚದ ಹಣವನ್ನು ಸ್ವೀಕರಿಸುತ್ತಿದ್ದರು. ಈ ವೇಳೆ ಜಿಲ್ಲಾ ಲೋಕಾಯುಕ್ತ ಅಧೀಕ್ಷಕ ಆಂಟನಿ ಜಾನ್ ನೇತೃತ್ವದ ತಂಡ ಏಕಾಏಕಿ ದಾಳಿ ನಡೆಸಿತು. ಪೊಲೀಸರನ್ನು ಕಂಡ ತಕ್ಷಣ ಗಾಬರಿಗೊಂಡ ಅಧಿಕಾರಿ ಶ್ಯಾಮಲಾ, ನಿವೃತ್ತ ನೌಕರ ಶ್ರೀನಿವಾಸ್ ಹಾಗೂ ಚಾಲಕ ಮಹಾಂತೇಶ್ ಅವರೊಂದಿಗೆ ಕಾರಿನಲ್ಲಿ ವೇಗವಾಗಿ ಪರಾರಿಯಾಗಲು ಯತ್ನಿಸಿದರು.
ಪೊಲೀಸರು ತಕ್ಷಣವೇ ತಮ್ಮ ವಾಹನಗಳಲ್ಲಿ ಆರೋಪಿಗಳ ಕಾರನ್ನು ಬೆನ್ನಟ್ಟಿದರು. ಸುಮಾರು 15 ಕಿಲೋಮೀಟರ್‌ಗಳವರೆಗೆ ನಡೆದ ಈ ಸಿನಿಮೀಯ ಬೆನ್ನಟ್ಟುವಿಕೆಯು ಬಂಗಾರಪೇಟೆ ರಸ್ತೆಯಲ್ಲಿ ಅಂತ್ಯಗೊಂಡಿತು. ಅಂತಿಮವಾಗಿ ಲೋಕಾಯುಕ್ತ ಪೊಲೀಸರು ಆರೋಪಿಗಳ ಕಾರಿಗೆ ತಮ್ಮ ವಾಹನವನ್ನು ಅಡ್ಡಗಟ್ಟಿ, ಅಧಿಕಾರಿ ಜೆ. ಶ್ಯಾಮಲಾ ಸೇರಿದಂತೆ ಮೂವರನ್ನು ವಶಕ್ಕೆ ಪಡೆದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ಯಾಮಲಾ, 'ಡಿ' ಗ್ರೂಪ್ ನಿವೃತ್ತ ನೌಕರ ಶ್ರೀನಿವಾಸ್ ಮತ್ತು ಚಾಲಕ ಮಹಾಂತೇಶ್ ಅವರನ್ನು ಬಂಧಿಸಲಾಗಿದ್ದು, ಲೋಕಾಯುಕ್ತ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.