image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಡಾ. ಸುನೀಲ ಪರೀಟರಿಗೆ ‘ಶಾಂತಾದೇವಿ ಬಣಕಾರ’ ದತ್ತಿ ಪ್ರಶಸ್ತಿ ಪ್ರದಾನ

ಡಾ. ಸುನೀಲ ಪರೀಟರಿಗೆ ‘ಶಾಂತಾದೇವಿ ಬಣಕಾರ’ ದತ್ತಿ ಪ್ರಶಸ್ತಿ ಪ್ರದಾನ

ಬೆಳಗಾವಿ: ಇಲ್ಲಿನ ಮಹಾಂತ ಭವನದಲ್ಲಿ ಮಾರ್ಚ್ 11ರಂದು ಆಯೋಜಿಸಲಾಗಿದ್ದ ಸಮಾರಂಭದಲ್ಲಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಪ್ರತಿಷ್ಠಿತ ‘ದಿ. ಶಾಂತಾದೇವಿ ಮಹಾಲಿಂಗಪ್ಪ ಬಣಕಾರ’ ದತ್ತಿ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಡಾ. ಸುನೀಲ ಪರೀಟ ಅವರಿಗೆ ಪ್ರದಾನ ಮಾಡಲಾಯಿತು. ಅವರು ಸಂಪಾದಿಸಿದ ‘ನಮ್ಮ ವೈದ್ಯೋನಾರಾಯಣ’ ಕೃತಿಗೆ ಈ ಗೌರವ ಸಂದಿದೆ.
ಪ್ರಶಸ್ತಿಯು ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದ್ದು, ಗಣ್ಯರ ಸಮ್ಮುಖದಲ್ಲಿ ಡಾ. ಪರೀಟ ಅವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಸುನೀಲ ಪರೀಟ ಅವರು, "ಕೇವಲ ಪ್ರಶಸ್ತಿಗಳು ಬರುವುದು ಮುಖ್ಯವಲ್ಲ; ಕೃತಿಯ ಕುರಿತು ಬರುವ ಸಕಾರಾತ್ಮಕ ವಿಮರ್ಶೆ ಮತ್ತು ಓದುಗರ ಮೆಚ್ಚುಗೆಯ ಮಾತುಗಳು ಲೇಖಕನಿಗೆ ನಿಜವಾದ ಸ್ಫೂರ್ತಿ ನೀಡುತ್ತವೆ. ಇಂತಹ ಪ್ರಶಸ್ತಿಗಳು ಸಾಹಿತಿಗಳಲ್ಲಿ ಹೆಚ್ಚಿನ ಬರವಣಿಗೆಯ ಪ್ರೋತ್ಸಾಹದ ಜೊತೆಗೆ ಸಮಾಜದ ಬಗ್ಗೆ ಹೆಚ್ಚಿನ ಜವಾಬ್ದಾರಿಯನ್ನು ಮೂಡಿಸುತ್ತವೆ," ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಡಾ. ದಯಾನಂದ ಧನವಂತ ಅವರು ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಸಾಹಿತ್ಯದ ಅವಶ್ಯಕತೆ ಮತ್ತು ಮಹತ್ವದ ಬಗ್ಗೆ ಬೆಳಕು ಚೆಲ್ಲಿದರು. ಕಸಾಪ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ಅವರು ಪ್ರಶಸ್ತಿಯ ಆಶಯ ನುಡಿಗಳನ್ನಾಡಿದರು.
ಇದೇ ಸಂದರ್ಭದಲ್ಲಿ ಡಾ. ವನಿತಾ ಮೆಟಗುಡ್ಡ ಅವರು ‘ಸ್ತ್ರೀ ಸೌಂದರ್ಯವರ್ಧಕ ಶಾಸ್ತ್ರ’ದ ಕುರಿತು ವಿಶೇಷ ಉಪನ್ಯಾಸ ನೀಡಿದರೆ, ಕಸಾಪ ಕಾರ್ಯದರ್ಶಿ ಎಂ. ವೈ. ಮೆಣಸಿನಕಾಯಿ ಅವರು ಆರೋಗ್ಯ ರಕ್ಷಣೆಯ ಬಗ್ಗೆ ಹಿತನುಡಿಗಳನ್ನು ಹೇಳಿದರು.
ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಶ್ರೀ ವಾಲಿಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ಹೇಮಾ ಸೊನೊಳ್ಳಿ ಸ್ವಾಗತಿಸಿದರು ಮತ್ತು ಪ್ರೊ. ಮಂಜುನಾಥ ಕಲಾಲ ಕಾರ್ಯಕ್ರಮ ನಿರೂಪಿಸಿದರು. ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ