ಬೆಂಗಳೂರು : ಮಾಜಿ ಸೈನಿಕರಿಗೆ ನಿವೇಶನ ನೀಡಲು ಜಮೀನು ಕೊರತೆ ಕಾಣುತ್ತಿದ್ದು, ಹಲವೆಡೆ ಸಾರ್ವಜನಿಕರು ಜಾಗ ಕೊಡಲು ವಿರೋಧಿಸುತ್ತಿದ್ದಾರೆ. ಕೆಲವೆಡೆ ನ್ಯಾಯಾಲಯದ ಮೆಟ್ಟಿಲು ಏರಿರುವುದಿದೆ. ಹೀಗಾಗಿ ಸೂಕ್ತ ಜಾಗ ಗುರುತಿಸಿ ನಿವೇಶನ ನೀಡಲು ಕ್ರಮ ವಹಿಸುತ್ತಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಬಿಜೆಪಿಯ ಬಿ.ಪಿ.ಹರೀಶ್ ಪ್ರಶ್ನೆಗೆ ಉತ್ತರಿಸಿದ ಅವರು, ದಾವಣಗೆರೆ ಜಿಲ್ಲೆಯಲ್ಲಿ ಕಳೆದ 3 ವರ್ಷಗಳಲ್ಲಿ 338 ಮಾಜಿ ಸೈನಿಕರಿಂದ ನಿವೇಶನ ಕೋರಿ ಅರ್ಜಿ ಸಲ್ಲಿಕೆಯಾಗಿದ್ದು, ಅರ್ಜಿ ಸ್ವೀಕಾರಕ್ಕೆ ಆನ್‌ಲೈನ್ ವ್ಯವಸ್ಥೆ ಮಾಡಿರುವುದರಿಂದ ಈ ಅಂಕಿ-ಅಂಶ ನಿಖರವಾಗಿ ಸಿಗುವಂತಾಗಿದೆ ಎಂದರು. ಸ್ವೀಕೃತವಾಗಿರುವ ಅರ್ಜಿಗಳ ಪರಿಶೀಲನೆ ನಡೆಯುತ್ತಿದ್ದು, ವಿವಿಧ ಸರ್ವೆ ನಂಬರ್‌ಗಳಲ್ಲಿ ಒಟ್ಟು 14 ಎಕರೆ ಜಮೀನನ್ನೂ ಗುರುತಿಸಿದ್ದೇವೆ. ಇದರಲ್ಲಿ 350 ನಿವೇಶನ ರಚಿಸಬಹುದಾಗಿದ್ದು, ಅರ್ಹರ ಆಯ್ಕೆ ಪ್ರಕ್ರಿಯೆ ನಡೆದ ಬಳಿಕ ನಿವೇಶನ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿದರು.
ಶಾಸಕ ಹರೀಶ್ ಮಾತನಾಡಿ, ಮಲೆಬೆನ್ನೂರಿನ ಸರ್ವೇ ನಂಬರ್ 155 ರಲ್ಲಿ ಸರ್ಕಾರ ಗುರುತಿಸಿರುವ ಜಾಗ ಗುಡ್ಡಗಾಡು. ಚಿರತೆ, ಕರಡಿ ಕಾಟ ಸಾಕಷ್ಟು ಇದೆ. ಅಂತಹ ಜಾಗಕ್ಕೆ ದೇಶದ ಗಡಿ ಕಾದ ಯೋಧರ ಕುಟುಂಬವನ್ನೇಕೆ ಕಳುಹಿಸುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಬಿಜೆಪಿಯ ಸಿಮೆಂಟ್ ಮಂಜು, ಸಕಲೇಶಪುರದಲ್ಲಿ ಸೈನಿಕರಿಗಾಗಿ ಮೀಸಲಿಟ್ಟ ಜಾಗ ಒತ್ತುವರಿಯಾಗಿದ್ದು, ಅದನ್ನು ತೆರವು ಮಾಡಿಸಿದರೆ ಜಾಗ ಸಿಗಲಿದೆ ಎಂದು ಸಲಹೆ ನೀಡಿದರು. ಇದೇ ಮಾದರಿಯ ಸಲಹೆ ಕೊಟ್ಟ ಬಿಜೆಪಿಯ ಎಸ್.ಆರ್. ವಿಶ್ವನಾಥ್, ಯಲಹಂಕದ ಗಂಟಗಾನಹಳ್ಳಿ ಬಳಿಯೂ ಜಾಗ ಒತ್ತುವರಿಯಾಗಿದ್ದು ಮಾಜಿ ಸೈನಿಕರು ನಿವೇಶನಕ್ಕಾಗಿ ಪ್ರತಿಭಟನೆ ಕೂಡ ಮಾಡಿದ್ದಾರೆ. ಈ ಜಾಗವನ್ನು ಸರ್ಕಾರ ತೆರವು ಮಾಡಿಸಿಕೊಡಬೇಕು ಎಂದು ಒತ್ತಾಯಿಸಿದರು. ಎಲ್ಲಕ್ಕೂ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ, ವಾಸಕ್ಕೆ ಯೋಗ್ಯವಾದ ಜಾಗವನ್ನೇ ಹುಡುಕಿ ಕೊಡುತ್ತೇವೆ ಎಂದು ಭರವಸೆ ನೀಡಿದರು.