ರಾಮನಗರ : ರಾಜ್ಯ ಸರ್ಕಾರವು ಒಳ ಮೀಸಲಾತಿ ಮೂಲಕ ಪರಿಶಿಷ್ಟ ಜಾತಿ ಹಾಗೂ ಅಲೆಮಾರಿ ಸಮುದಾಯಗಳನ್ನು ಒಡೆದಾಳುತ್ತಿದೆ. ಮೀಸಲಾತಿಗೆ ಆಧಾರವಾಗಿರುವ ನ್ಯಾಯಮೂರ್ತಿ ನಾಗಮೋಹನ ದಾಸ್ ವರದಿ ತಿರಸ್ಕರಿಸಲು ಆಗ್ರಹಿಸಿ, ಪರಿಸಿಷ್ಟ ಬಲಗೈ ಜಾತಿ ಹಿತರಕ್ಷಣಾ ಸಮಿತಿಯಿಂದ ಮಾರ್ಚ್ 9ರಂದು ಕನಕಪುರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಧಮ್ಮ ದೀವಿಗೆ ಟ್ರಸ್ಟ್‌ನ ಮಲ್ಲಿಕಾರ್ಜುನ ಹೇಳಿದರು. 'ಒಂದೇ ತಾಯಿ ಮಕ್ಕಳಂತಿದ್ದ ಪರಿಶಿಷ್ಟ ಸಮುದಾಯದ 101 ಜಾತಿಗಳನ್ನು ಒಳ ಮೀಸಲಾತಿ ಹೆಸರಿನಲ್ಲಿ ಹೋಳಾಗಿಸುವ ಪ್ರಯತ್ನಗಳು ವ್ಯಾಪಕವಾಗಿ ನಡೆಯುತ್ತಿವೆ. ಇದುವರೆಗೆ ಅಣ್ಣ-ತಮ್ಮಂದಿರಂತಿದ್ದ ಸಮುದಾಯಗಳು ಈಗ ಪರಸ್ಪರ ದೂಷಣೆಯಲ್ಲಿ ತೊಡಗಿದ್ದಾರೆ' ಎಂದು ನಗರದ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು. 'ಬೇರೆ ಸಮುದಾಯಗಳಲ್ಲಿ ಇಲ್ಲದ ಒಳ ಮೀಸಲಾತಿಯನ್ನು ಪರಿಶಿಷ್ಟರಲ್ಲೇ ತಂದು, ಅವರಲ್ಲಿ ಮತ್ತಷ್ಟು ಒಡಕು ಮೂಡಿಸಲಾಗುತ್ತಿದೆ. ಆ ಮೂಲಕ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿವೆ. ಇದರಿಂದಾಗಿ ಪರಿಶಿಷ್ಟ ಸಮುದಾಯಗಳು ಶಾಶ್ವತವಾಗಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗುವಂತೆ ಮಾಡಲಾಗುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ರಾಜ್ಯದಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಪರಿಶಿಷ್ಟ ಸಮುದಾಯಗಳು ಒಂದಾಗಿ ರಾಜಕೀಯ ಶಕ್ತಿಯಾಗಿ ಬೆಳೆಯದಂತೆ ತಡೆಯುವ ಉದ್ದೇಶದಿಂದ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿರುವ ಮನುವಾದಿಗಳು ಒಳ ಮೀಸಲಾತಿ ಹೆಸರಿನಲ್ಲಿ ಕುತಂತ್ರ ಹೆಣೆದಿದ್ದಾರೆ. ಆ ಮೂಲಕ ದಲಿತರು ಬೀದಿಯಲ್ಲಿ ಜಗಳವಾಡುವಂತೆ ಮಾಡಿದ್ದಾರೆ' ಎಂದರು. 'ಒಳ ಮೀಸಲಾತಿ ವಿಚಾರವು ಇದೀಗ ರಾಜ್ಯ ಸರ್ಕಾರ, ರಾಜ್ಯಪಾಲ, ಹೈಕೋರ್ಟ್, ಕೇಂದ್ರ ಸರ್ಕಾರ, ರಾಷ್ಟ್ರಪತಿ, ಸುಪ್ರೀಂ ಕೋರ್ಟ್ ಅಂಗಳದಲ್ಲಿ ಅಲ್ಲಿಂದಿಲ್ಲಿಗೆ ಓಡಾಡುತ್ತಿದೆ. ಇದರಿಂದಾಗಿ, ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ಸೇರಿದಂತೆ ಹಲವು ವಿಷಯಗಳಲ್ಲಿ ಗೊಂದಲಗಳು ಸೃಷ್ಟಿಯಾಗಿವೆ. ಇದು ಪರಿಶಿಷ್ಟ ಸಮುದಾಯದ ಜನರ ಬದುಕಿನ ಜೊತೆಗಿನ ಚೆಲ್ಲಾಟವಾಗಿದೆ' ಎಂದು ಹೇಳಿದರು.