ಬೆಂಗಳೂರು: ದೇಶಕ್ಕಿಂತಲೂ ವ್ಯಕ್ತಿ ದೊಡ್ಡವನಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ರಾಷ್ಟ್ರದ ಸಾರ್ವಭೌಮತೆ, ಏಕತೆ ಹಾಗೂ ಸಮಗ್ರತೆಯ ಹಿತಾಸಕ್ತಿಗೆ ಸವಾಲು ಎದುರಾದ ಸಂದರ್ಭದಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಮನ್ನಣೆ ನೀಡಲಾಗದು ಎಂದು ತಿಳಿಸಿದೆ.
ಇಸ್ಲಾಮಿಕ್ ಸ್ಟೇಟ್ (ಐಸಿಸ್) ಸಂಘಟನೆಯಲ್ಲಿ ಸದಸ್ಯ ಎಂಬ ಆರೋಪದಲ್ಲಿ ಬಂಧಿತನಾಗಿರುವ ಅರಫತ್ ಎಂಬವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ನ್ಯಾಯಮೂರ್ತಿ ಜೆ.ಎಂ.ಖಾಜಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಸಂವಿಧಾನದ 21ನೇ ವಿಧಿ ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದಾಗಿದೆ. ಕಾನೂನಿನ ಸರಿಯಾದ ಪ್ರಕ್ರಿಯೆಯಿಲ್ಲದೆ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಅವಕಾಶವಿಲ್ಲ. ಆದರೆ ರಾಷ್ಟ್ರೀಯ ಹಿತಾಸಕ್ತಿ ಒಳಗೊಂಡಾಗ ಅಥವಾ ರಾಷ್ಟ್ರದ ಏಕತೆ, ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಸವಾಲನ್ನು ಒಡ್ಡಿದಾಗ, ವೈಯಕ್ತಿಕ ಸ್ವಾತಂತ್ರ್ಯದ ಮನ್ನಣೆ ಕಳೆದುಕೊಳ್ಳುತ್ತದೆ ಎಂದು ಪೀಠ ತಿಳಿಸಿದೆ.
ಸೂಕ್ತ ಕಾನೂನಿನ ಅಡಿಯಲ್ಲಿ ನಿಯಮಗಳನ್ನು ಪಾಲಿಸದೆ, ಬಂಧಿಸಿದ ಸಂದರ್ಭದಲ್ಲಿ ಸಂವಿಧಾನದ ಅನುಚ್ಛೇದ 21ರ ಅಡಿಯಲ್ಲಿ ಸ್ವಾತಂತ್ರ್ಯ ಹಕ್ಕು ಪಡೆಯಲು ಹೋರಾಡಬಹುದಾಗಿದೆ. ಆದರೆ, ಅಪರಾಧದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಲ್ಲಿ ಅದನ್ನು ಕಾನೂನಿನ ಅಡಿಯಲ್ಲಿ ಪರಿಗಣಿಸಬೇಕಾಗಿದ್ದು, ಈ ಸಂದರ್ಭದಲ್ಲಿ ವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.