ಕಲಬುರಗಿ : ಕಲಬುರಗಿಯಲ್ಲಿ ಇತ್ತೀಚೆಗೆ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದ 'ಪ್ರಬುದ್ಧ ಅಕಾಡೆಮಿ' ಮೇಲ್ಚಾವಣಿ ಕುಸಿದಿದೆ. ವಿದ್ಯಾರ್ಥಿಗಳು ಅಭ್ಯಾಸ ನಿರತರಾಗಿದ್ದ ವೇಳೆ ನಡೆದ ಈ ಘಟನೆಯು ಕಳಪೆ ಕಾಮಗಾರಿಯ ಆರೋಪಕ್ಕೆ ಕಾರಣವಾಗಿದ್ದು, ಜೆಡಿಎಸ್ ಪಕ್ಷವು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಪ್ರಬುದ್ಧ ಅಕಾಡೆಮಿಯಲ್ಲಿ ವಿದ್ಯಾರ್ಥಿಗಳು ಅಭ್ಯಾಸ ನಿರತರಾಗಿದ್ದ ವೇಳೆ ಇದ್ದಕ್ಕಿದ್ದಂತೆ ಮೇಲ್ಚಾವಣಿಯ ಭಾಗವೊಂದು ಕುಸಿದು ಬಿದ್ದಿದೆ. ಅದೃಷ್ಟವಶಾತ್ ಅಲ್ಲಿದ್ದ ವಿದ್ಯಾರ್ಥಿನಿಯೊಬ್ಬಳು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ಘಟನೆಯಿಂದ ಅಕಾಡೆಮಿಯಲ್ಲಿದ್ದ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದಾರೆ. ಸಚಿವರು ದೇಶದಲ್ಲೇ ಪ್ರಪ್ರಥಮ ಎಂದು ಬಣ್ಣಿಸಿದ್ದ ಕಟ್ಟಡದ ಸ್ಥಿತಿ ಇಷ್ಟು ಬೇಗ ಹೀಗಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯ ಫೋಟೋಗಳನ್ನು ಹಂಚಿಕೊಂಡಿರುವ ಜೆಡಿಎಸ್, ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದೆ. 'ಕಮಿಷನ್ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಕಳಪೆ! ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಉದ್ಘಾಟನೆಗೊಂಡು ತಿಂಗಳು ಸಹ ಕಳೆದಿಲ್ಲ, ಆಗಲೇ ಮೇಲ್ಚಾವಣಿ ಕುಸಿದಿದೆ. ಕಲ್ಯಾಣ ಕರ್ನಾಟಕ ಭಾಗದ ಜನರ ಅಭಿವೃದ್ಧಿಗೆ ಮೀಸಲಿಟ್ಟ ಹಣ ಇಂತಹ ಕಳಪೆ ಕಾಮಗಾರಿಗಳಿಂದ ವ್ಯರ್ಥವಾಗುತ್ತಿದೆ' ಎಂದು ಜೆಡಿಎಸ್ ಆರೋಪಿಸಿದೆ. ಅಲ್ಲದೆ, ವಿದ್ಯಾರ್ಥಿನಿಯ ಪ್ರಾಣಕ್ಕೆ ಅಪಾಯ ಬಂದಿದ್ದರೂ ಸರ್ಕಾರ ಮೌನವಾಗಿರುವುದು ಸರಿಯಲ್ಲ ಎಂದು ಟೀಕಿಸಿದೆ.