ಬೆಂಗಳೂರು : ಒಂದು ಕಡೆ ಶಾಂತಿಮಂತ್ರ ಪಠಿಸುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನೊಂದು ಕಡೆ ಯುದ್ಧ ಮಾಡುತ್ತಾರೆ. ಈ ರೀತಿಯ ತದ್ವಿರುದ್ಧ ನಿಲುವನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇರಾನ್ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯಾಗಿದೆ ಎಂಬ ಸಂಗತಿ ಟಿವಿಯಲ್ಲಿ ಬರುತ್ತಿದೆ. ಅದು ಕೂಡ ಖಂಡನೀಯ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ ಎಂದರು.
ದುಬೈನಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಮುಖ್ಯಕಾರ್ಯದರ್ಶಿ ಜೊತೆಗೆ ಮಾತಾಡಿದ್ದೇನೆ. ವಿದೇಶಾಂಗ ಸಚಿವಾಲಯದೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ದುಬೈ ವಿಮಾನ ನಿಲ್ದಾಣ ಸದ್ಯಕ್ಕೆ ಮುಚ್ಚಿದೆ. ಅದು ತೆರವು ಆಗುತ್ತಿದ್ದಂತೆಯೇ ಯಾರಿಗೂ ತೊಂದರೆ ಆಗದಂತೆ ಅಲ್ಲಿದ್ದವರನ್ನು ವಾಪಸ್ ಕರೆತರಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರ ಜೊತೆ ಮಾತಾಡಿರುವೆ. ಅವರು ಹೋಟೆಲ್‌ನಲ್ಲಿ ಅರಾಮವಾಗಿ ಇದ್ದಾರಂತೆ. ಭೋಜೇಗೌಡ, ಪುಷ್ಪಾ ಅಮರನಾಥ್ ಮಾತ್ರವಲ್ಲ ಅಲ್ಲಿರುವ ಎಲ್ಲ ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದರು.