image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ – ದುಬೈನಲ್ಲಿ ಸಿಲುಕಿದ ನೂರಾರು ಕನ್ನಡಿಗರು; ರಾಜ್ಯ ಸರ್ಕಾರದಿಂದ ಹೈ ಅಲರ್ಟ್

ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ – ದುಬೈನಲ್ಲಿ ಸಿಲುಕಿದ ನೂರಾರು ಕನ್ನಡಿಗರು; ರಾಜ್ಯ ಸರ್ಕಾರದಿಂದ ಹೈ ಅಲರ್ಟ್

ಬೆಂಗಳೂರು: ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ವಾಯುಪ್ರದೇಶ (Airspace) ಬಂದ್ ಆಗಿದ್ದು, ಅಂತರಾಷ್ಟ್ರೀಯ ವಿಮಾನಯಾನದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಕರುನಾಡಿನ ನೂರಾರು ಪ್ರಯಾಣಿಕರು ದುಬೈ ಸೇರಿದಂತೆ ವಿವಿಧ ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿದ್ದು, ಅವರ ಸುರಕ್ಷತೆಗಾಗಿ ಕರ್ನಾಟಕ ಸರ್ಕಾರ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ.

ನಾಗರಿಕ ವಿಮಾನಯಾನ ಸಚಿವಾಲಯದ ಇತ್ತೀಚಿನ NOTAM  ಆದೇಶದಂತೆ, ಇರಾನ್, ಇಸ್ರೇಲ್, ಯುಎಇ, ಸೌದಿ ಅರೇಬಿಯಾ, ಕುವೈತ್, ಮತ್ತು ಕತಾರ್ ಸೇರಿದಂತೆ ಒಟ್ಟು 11 ದೇಶಗಳ ವೈಮಾನಿಕ ಮಾರ್ಗಗಳನ್ನು ಮಾರ್ಚ್ 2ರವರೆಗೆ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ 30ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ.
ದುಬೈನಲ್ಲಿ ಕನ್ನಡಿಗರ ಪರದಾಟ
ವಿಶೇಷವಾಗಿ ಯುಎಇ (ದುಬೈ) ವಿಮಾನ ನಿಲ್ದಾಣದಲ್ಲಿ ಕರ್ನಾಟಕದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಿಲುಕಿದ್ದಾರೆ. ಬಳ್ಳಾರಿಯ 32 ಮಂದಿ ಪ್ರವಾಸಿಗರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡ ಅವರು ಕೂಡ ದುಬೈನಲ್ಲಿ ಬಾಕಿಯಾಗಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರಂತರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

 ರಾಜ್ಯ ಸರಕಾರದ ತುರ್ತು ಕಾರ್ಯಾಚರಣೆಗಳು 

ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ಮತ್ತು ಎಲ್ಲಾ ಜಿಲ್ಲಾ ಕೇಂದ್ರಗಳನ್ನು (DEOC) ಸಕ್ರಿಯಗೊಳಿಸಲಾಗಿದ್ದು, ದಿನದ 24 ಗಂಟೆಯೂ ಸಹಾಯವಾಣಿ ಲಭ್ಯವಿರುತ್ತದೆ.
 ನವದೆಹಲಿಯ ಕರ್ನಾಟಕ ಭವನದ ತಂಡವು ವಿದೇಶಾಂಗ ಸಚಿವಾಲಯದ (MEA) 'ರಾಪಿಡ್ ರೆಸ್ಪಾನ್ಸ್ ಸೆಲ್' ನೊಂದಿಗೆ ನಿರಂತರ ಸಂಪರ್ಕದಲ್ಲಿದೆ.
ಸಾರಥಿ ಸಹಾಯತಾ ಪೋರ್ಟಲ್: 
ವಿದೇಶದಲ್ಲಿರುವ ಕನ್ನಡಿಗರು ತಕ್ಷಣವೇ 'ಸಾರಥಿ ಸಹಾಯತಾ' ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಲು ಮತ್ತು ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಮುಖ್ಯಮಂತ್ರಿಗಳ ಭರವಸೆ:

ಈ ಕುರಿತು ಎಕ್ಸ್ (ಟ್ವಿಟರ್) ಮೂಲಕ ಮಾಹಿತಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, "ಗಲ್ಫ್ ರಾಷ್ಟ್ರಗಳಲ್ಲಿರುವ ಕನ್ನಡಿಗರ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಸಿಲುಕಿಕೊಂಡಿರುವವರು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಮತ್ತು ಸ್ಥಳೀಯ ಸರ್ಕಾರದ ಮಾರ್ಗಸೂಚಿ ಪಾಲಿಸುವಂತೆ" ಮನವಿ ಮಾಡಿದ್ದಾರೆ. ಅಲ್ಲದೆ, ವೀಸಾ ಅವಧಿ ಮುಗಿಯುತ್ತಿರುವವರು ಹತ್ತಿರದ FRRO ಕಚೇರಿಯನ್ನು ಸಂಪರ್ಕಿಸಲು ತಿಳಿಸಿದ್ದಾರೆ.
ಸಹಾಯಕ್ಕಾಗಿ
ಸಂಕಷ್ಟದಲ್ಲಿರುವವರ ಕುಟುಂಬಸ್ಥರು ತಮ್ಮ ಜಿಲ್ಲಾಧಿಕಾರಿ ಕಚೇರಿ ಅಥವಾ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವನ್ನು ಸಂಪರ್ಕಿಸಬಹುದು. ಪರಿಸ್ಥಿತಿಯು ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದು, ವಿಮಾನಯಾನ ಪುನರಾರಂಭದ ಬಗ್ಗೆ ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Category
ಕರಾವಳಿ ತರಂಗಿಣಿ