image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳ ನಾಮನಿರ್ದೇಶಿತ ಅಧ್ಯಕ್ಷರುಗಳ ಅವಧಿಯನ್ನು ವಿಸ್ತರಿಸಿ ಸರ್ಕಾರ ಆದೇಶ

ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳ ನಾಮನಿರ್ದೇಶಿತ ಅಧ್ಯಕ್ಷರುಗಳ ಅವಧಿಯನ್ನು ವಿಸ್ತರಿಸಿ ಸರ್ಕಾರ ಆದೇಶ

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧೀನದಲ್ಲಿ ಬರುವ ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳ ನಾಮನಿರ್ದೇಶಿತ ಅಧ್ಯಕ್ಷರುಗಳ ಅವಧಿಯನ್ನು ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ನೇಮಕಗೊಂಡಿದ್ದ ಅಧ್ಯಕ್ಷರ ಅವಧಿ ಮುಕ್ತಾಯಗೊಂಡಿದ್ದರೂ ಅಥವಾ ಮುಕ್ತಾಯದ ಹಂತದಲ್ಲಿದ್ದರೂ, ಆಡಳಿತಾತ್ಮಕ ಹಿತದೃಷ್ಟಿಯಿಂದ ಮುಂದಿನ ಆದೇಶದವರೆಗೆ ಅವರನ್ನು ಅದೇ ಸ್ಥಾನದಲ್ಲಿ ಮುಂದುವರಿಸಲು ತೀರ್ಮಾನಿಸಲಾಗಿದೆ. ಮುಂದುವರಿದ ಅವಧಿಯಲ್ಲಿಯೂ ಅಧ್ಯಕ್ಷರುಗಳಿಗೆ ಈ ಹಿಂದೆ ನೀಡಲಾಗಿದ್ದ ಸಂಪುಟ ದರ್ಜೆ ಸಚಿವ ಸ್ಥಾನಮಾನ ಹಾಗೂ ಅದಕ್ಕೆ ಪೂರಕವಾದ ವಾಹನ, ಭತ್ಯೆ ಸೇರಿದಂತೆ ಎಲ್ಲಾ ಸೌಲಭ್ಯಗಳು ಮುಂದುವರಿಯಲಿವೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.

ಈ ಆದೇಶದ ಅನ್ವಯ, ಸಂಬಂಧಪಟ್ಟ ಇಲಾಖೆಗಳು ತಮ್ಮ ಅಧೀನದಲ್ಲಿರುವ ನಿಗಮ-ಮಂಡಳಿಗಳ ಅಧಿನಿಯಮ ಮತ್ತು ನಿಯಮಾವಳಿಗಳ ರೀತ್ಯಾ ತಕ್ಷಣವೇ ಜಾರಿಗೆ ಬರುವಂತೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಬೇಕು ಎಂದು ಸೂಚಿಸಲಾಗಿದೆ. ಇದರಿಂದಾಗಿ ವಿವಿಧ ಅಭಿವೃದ್ಧಿ ಪ್ರಾಧಿಕಾರಗಳು ಹಾಗೂ ನಿಗಮಗಳ ದೈನಂದಿನ ಚಟುವಟಿಕೆಗಳು ಸುಗಮವಾಗಿ ನಡೆಯಲು ಹಾದಿ ಸುಗಮವಾದಂತಾಗಿದೆ. ವಿಶೇಷವಾಗಿ ಶಾಸಕರು ಅಧ್ಯಕ್ಷರಾಗಿರುವ ಮಂಡಳಿಗಳಲ್ಲಿ ಈ ಬದಲಾವಣೆ ತಕ್ಷಣದಿಂದ ಜಾರಿಗೆ ಬರಲಿದ್ದು, ಸರ್ಕಾರದ ಮುಂದಿನ ತೀರ್ಮಾನದವರೆಗೆ ಹಾಲಿ ಇರುವವರೇ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ.

Category
ಕರಾವಳಿ ತರಂಗಿಣಿ