ಚಿತ್ರದುರ್ಗ: ದಾವಣಗೆರೆ- ಚಿತ್ರದುರ್ಗ- ತುಮಕೂರು ನೇರ ರೈಲು ಮಾರ್ಗ 2027, ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು. ತಾಲ್ಲೂಕಿನ ಹಂಪನೂರು ಗ್ರಾಮದ ಬಳಿ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು. 'ದಾವಣಗೆರೆ- ತುಮಕೂರು ಮಾರ್ಗ ಮಾತ್ರವಲ್ಲದೇ ಗದಗ- ವಾಡಿ, ರಾಯದುರ್ಗ- ತುಮಕೂರು ಮಾರ್ಗವನ್ನೂ 2027ರ ವೇಳೆಗೆ ಪೂರ್ಣಗೊಳಿಸಲಾಗುವುದು' ಎಂದರು.
'ದಾವಣಗೆರೆಯಿಂದ ಹೆಬ್ಬಾಳ ಗ್ರಾಮದವರೆಗೆ ಈಗಾಗಲೇ ಕಾಮಗಾರಿ ಪೂರ್ಣಗೊಂಡಿದೆ. ನಾನು ಮೊಟಾರ್ ಟ್ರಾಲಿ ಮೂಲಕ ಸಂಚರಿಸಿ ಪರಿಶೀಲಿಸಿದ್ದೇನೆ. ಚಿತ್ರದುರ್ಗದ ಬಳಿ ಕಾಮಗಾರಿ ಕೊಂಚ ತಡವಾಗಿದೆ. 6 ತಿಂಗಳೊಳಗೆ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಸೂಚಿಸಿದ್ದೇನೆ' ಎಂದರು. 'ನಾನು ಬೆಳಿಗ್ಗೆ 6 ಗಂಟೆಗೆ ಬೆಂಗಳೂರಿನಿಂದ ರೈಲಿನಲ್ಲಿ ಹೊರಟೆ. ದಾವಣಗೆರೆ ತಲುಪಲು 5 ಗಂಟೆ ಹಿಡಿಯಿತು. ನೇರ ರೈಲು ಮಾರ್ಗ ಪೂರ್ಣಗೊಂಡರೆ ಎರಡೂವರೆ ಗಂಟೆಯಲ್ಲಿ ಬೆಂಗಳೂರು- ದಾವಣಗೆರೆ ನಡುವೆ ಓಡಾಡಬಹುದು. ಈ ರೈಲು ಮಾರ್ಗ ಬಯಲುಸೀಮೆ ಜನರ ಬಹು ಕಾಲದ ಕನಸಾಗಿದೆ' ಎಂದರು.